ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಪಟ್ಟಣಕ್ಕೆ ಹಮ್ಮಿಗಿ ಡ್ಯಾಮಿನ ಹಿನ್ನೀರಿನ ಗುಮ್ಮಗೊಳ ಗ್ರಾಮದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾದ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಬುಧವಾರ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣು ಗೋಡಿ ಮಾತನಾಡಿ, ಪಟ್ಟಣದಲ್ಲಿ ಸುಮಾರು 25 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ನದಿಯಿಂದ ಹಾವೇರಿ ಜಿಲ್ಲೆಯ ಮೇವುಂಡಿ ಜಾಕ್‌ವೆಲ್‌ನಿಂದ ನಗರಕ್ಕೆ ಕುಡಿಯುವ ನೀರಿನ ಯೋಜನೆ ಸಾಕಾರವಾಗಿತ್ತು. ಆದರೆ 25 ವರ್ಷಗಳಿಂದಲೂ ಅದೇ ಹಳೆ ಪೈಪ್‌ಲೈನ್‌ಗಳ ಮೂಲಕ ನೀರು ಬರುತ್ತಿದ್ದು, ಈ ಪೈಪ್‌ಗಳು ಬಹುತೇಕ ತುಕ್ಕು ಹಿಡಿದು ಎಲ್ಲೆಡೆ ಸೋರಿಕೆಯಾಗುತ್ತಿವೆ. ಬೇಸಿಗೆ ಕಾಲದಲ್ಲಿ ಮೇವುಂಡಿ ಜಾಕವೆಲ್‌ವರೆಗೂ ತುಂಗಭದ್ರಾ ನದಿಯ ನೀರು ಬರುವದು ನಿಂತು ಹೋಗಿ ಪಟ್ಟಣದಲ್ಲಿ ನೀರಿನ ಹಾಹಾಕಾರ ಪ್ರಾರಂಭವಾಗುತ್ತದೆ.
ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳಾದ ಇಸ್ಮಾಯಿಲ್ ಆಡೂರ, ನಾಗೇಶ ಅಮರಾಪುರ, ಪ್ರವೀಣ ಆಚಾರಿ, ಮೈನುದ್ದಿನ ಮನಿಯಾರ, ಯಲ್ಲಪ್ಪ ಹಂಜಗಿ, ಮಹಮ್ಮದಅಲಿ ಶಿಗ್ಗಾಂವ, ವಿನಾಯಕ ಚಿತ್ರಬಾವಿ, ನಾಗರಾಜ ಅಣ್ಣಿಗೇರಿ, ಅಭಿಷೇಕ ಸಾತಪುತೆ, ರುಕ್ಮಾನ ಬೆಟಗೇರಿ, ಯಲ್ಲಪ್ಪಗೌಡ ಮುದ್ನರ, ಸಂತೋಷ ರಾಠೋಡ, ಅಷ್ಪಾಕ ಬಾಗೋಡಿ, ವಿನಾಯಕ ಕಟವಟೆ, ನಾಗರಾಜ ಬನ್ನಿ, ಪ್ರಕಾಶ ತೇರದಾಳ, ಆಶೀಪ ಯಲಿವಾರ, ವಿನಾಯಕ ಸಂಶಿ ಸೇರಿದಂತೆ ಸಂಘಟನೆಯ ಜಿಲ್ಲಾ ಘಟಕ ಮತ್ತು ಲಕ್ಷೇಶ್ವರ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.
50-60 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಪಟ್ಟಣವು ವ್ಯಾಪಾರ, ಶಿಕ್ಷಣ ಸೇರಿದಂತೆ ಪ್ರಗತಿಯಲ್ಲಿ ಸಾಗುತ್ತಿದೆ. ನಿತ್ಯ ಸಾವಿರಾರು ಜನರು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುತ್ತಿದ್ದು, ಅವರಿಗೆ ಹಾಗೂ ಪಟ್ಟಣದಲ್ಲಿನ ಜನರಿಗೆ ಮುಖ್ಯವಾಗಿ ಕುಡಿಯುವ ನೀರು ಪೂರೈಸುವದು ದುಸ್ತರವಾಗುತ್ತಿದೆ. ಆದ್ದರಿಂದ ಹಮ್ಮಿಗಿ ಡ್ಯಾಮಿನ ಹಿನ್ನೀರಿನ ಪ್ರದೇಶವಾದ ಗುಮ್ಮಗೋಳದಿಂದ ನಗರಕ್ಕೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕೆಂದು ಅಗ್ರಹಿಸಿದರು.


