ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಒತ್ತುವರಿಯಾಗಿರುವ ಅರಣ್ಯ ಮಾರ್ಗವನ್ನು ತೆರವುಗೊಳಿಸಿ ಕುರಿಗಾಹಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿ ಹಲುವಾಗಲು, ಕಣಿವಿ ಮತ್ತು ಗರ್ಭಗುಡಿ ಗ್ರಾಮದ ಕುರಿಗಾಹಿಗಳು ತಾಲೂಕು ವಲಯ ಅರಣ್ಯಾಧಿಕಾರಿ ರಾಜು ಗೊಂದ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಮಳೆಗಾಲದಲ್ಲಿ ಕುರಿಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಲು ಒಂದೇ ದಾರಿಯಿದ್ದು, ಅದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಗುಡ್ಡಕ್ಕೆ ಹೋಗಲು ತೊಂದರೆಯಾಗುತ್ತಿದೆ. ಆದ್ದರಿಂದ, ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಿ ಕುರಿಗಾಹಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿಗಳು, ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುರುಬ ಸಮಾಜದ ಮಾಜಿ ಅಧ್ಯಕ್ಷ ವೈ.ಕೆಬಿ. ದುರುಗಪ್ಪ, ಪುರಸಭೆ ನಾಮನಿರ್ದೇಶಿತ ಸದಸ್ಯ ಎಚ್.ವಸಂತಪ್ಪ, ಹಲುವಾಗಲು ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ದ್ಯಾಮಪ್ಪ, ಭೂತಪ್ಪರ ಗಂಗಪ್ಪ, ಮೇಡ್ಲೆರಿ ನಿಂಗಪ್ಪ, ಬಿ.ನಾಗರಾಜ, ರುದ್ರಪ್ಪ, ಪರಸಪ್ಪ ಸೇರಿದಂತೆ ಇತರರು ಇದ್ದರು.