ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಲು ಒತ್ತಾಯಿಸಿ ಸ್ಲಂ ಜನಾಂದೋಲನ–ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನವಿ ಮಾತನಾಡಿ, ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಪ್ರತಿ 10 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಬೇಕು. ಸಮೀಕ್ಷೆಯಿಂದ ಬರುವ ಸ್ಥಿತಿ–ಗತಿಗಳನ್ನು ತಿಳಿದುಕೊಂಡು ಚಾಲ್ತಿಯಲ್ಲಿರುವ ಮೀಸಲಾತಿಯನ್ನು ಪರಿಶೀಲಿಸಿ, ಪರಿಷ್ಕರಿಸಿ ಅದಕ್ಕೆ ಪೂರಕ ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಮಾಹಿತಿಯನ್ನು ನೀಡುವುದು ಆಯೋಗದ ಕರ್ತವ್ಯವಾಗಿದೆ.
ಆಯೋಗವು ಈ ಸಮೀಕ್ಷೆ ಮೂಲಕ ರಾಜ್ಯದಲ್ಲಿರುವ ಎಲ್ಲಾ ಧರ್ಮದ, ಎಲ್ಲಾ ಜಾತಿಯವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ನಡೆಸಿ, ಸರ್ಕಾರವು ಅರ್ಹರಿಗೆ ಅಗತ್ಯ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲು ಹಾಗೂ ನೀತಿಗಳನ್ನು ರೂಪಿಸಲು ಮಾಹಿತಿಯನ್ನು ನೀಡುತ್ತದೆ. ಆದರೆ, ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಮಾತನಾಡಿ ದೇಶಾದ್ಯಂತ ಜಾತಿಗಣತಿ ನಡೆಸುತ್ತೇವೆ ಎಂದು ಘೋಷಣೆ ಮಾಡಿದಾಗ ವಿರೋಧಿಸದೆ ಇದ್ದವರು ಈಗ ರಾಜ್ಯದ ಸಮೀಕ್ಷೆಯನ್ನು ವಿರೋಧ ಮಾಡುತ್ತಿದ್ದಾರೆ.
ಸಮೀಕ್ಷೆ ವಿರುದ್ಧವಾಗಿ ವಿರೋಧ ಪಕ್ಷದ ಮುಖಂಡರು ನಡೆಸುತ್ತಿರುವ ಕುತಂತ್ರಗಳಿಗೆ ಮುಖ್ಯಮಂತ್ರಿಗಳು ಗಮನ ನೀಡದೇ ಸಮೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಿ, ಈ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ವೆಂಕಟೇಶ ಬಿಂಕದಕಟ್ಟಿ, ಖಾಜಾಸಾಬ ಇಸ್ಮಾಯಿಲ್ನವರ, ಸಲೀಂ ಹರಿಹರ, ಭರತ್ ನವಲಗುಂದ, ರಿಜ್ವಾನ್ ಮುಲ್ಲಾ, ಖಾಜಾಸಾಬ ಬಳ್ಳಾರಿ, ಶರಣಪ್ಪ ಸೂಡಿ, ಗೌಸಸಾಬ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.