ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮತ್ತೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು, ಬೀದಿನಾಯಿಗಳ ಹಾವಳಿಯಿಂದ ಮಕ್ಕಳನ್ನು, ವೃದ್ಧರನ್ನು ರಕ್ಷಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಮತ್ತು ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಶುಕ್ರವಾರ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಅನಿಲ ಮುಳಗುಂದ ಮತ್ತು ಯಲ್ಲಪ್ಪ ಹಂಜಗಿ, ಹುಲಗೇರಿಬಣ, ವಾರ್ಡ್ ನಂ.20, ಪುರಸಭೆ ಹಿಂಭಾಗದಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳು ಮತ್ತು ವೃದ್ಧರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಕೂಡಲೇ ಪುರಸಭೆಯವರು ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ, ಬೀದಿ ನಾಯಿಗಳ ನಿಯಂತ್ರಣಕ್ಕೆ ಈ ಹಿಂದೆ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ನಾಯಿಗಳ ಸಂಖ್ಯೆ ಹೆಚ್ಚಾಗಿರುವ ಹಾಗೂ ಜನರ ಮೇಲೆ ದಾಳಿ ನಡೆಸುತ್ತಿರುವ ದೂರುಗಳು ಬರುತ್ತಿದ್ದು, ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಟಾಕಪ್ಪ ಸಾತಪುತೆ, ಎನ್.ಎಚ್. ಶೆರಸೂರಿ, ಶಶಿಕುಮಾರ ಸಾತಪುತೆ, ಅಭಿಷೇಕ್ ಸಾತಪುತೆ, ಸಿದ್ದಪ್ಪ ಗದ್ದಿ, ದೇವಪ್ಪ ಸಾತಪುತೆ ಮುಂತಾದವರಿದ್ದರು.