ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ 2021ರಲ್ಲಿ ದೇಶದಲ್ಲಿ ಕಂಡುಬಂದ ಕೊರೋನಾ ಭೀಕರ ರೋಗದ ಸಂದರ್ಭದಲ್ಲಿ ಪಟ್ಟಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಕೊರೋನಾ ಬಾಧೆಗೊಳಗಾದ ರೋಗಿಗಳಿಗೆ ನಿತ್ಯ ಉಪಹಾರ-ಊಟ ಪೂರೈಸಿದ ಹಣವನ್ನು ಪಾವತಿಸದೇ ಬಾಕಿ ಇರಿಸಿಕೊಂಡಿದ್ದು, ಶೀಘ್ರ ಪಾವತಿಸುವಂತೆ ಆಹಾರ ಪೂರೈಸಿದ ಹೊಟೇಲ್ ಮಾಲೀಕ ಇಸ್ಮಾಯಿಲ್ ಅಡೂರ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರಿಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಕೊರೋನಾ ರೋಗದಿಂದ ಬಾಧೆಗೊಳಗಾದ ರೋಗಿಗಳಿಗೆ ನಿತ್ಯ ಉಪಹಾರ, ಊಟ ಪೂರೈಸಿದ ಸುಮಾರು 1 ಲಕ್ಷ 49 ಸಾವಿರ ರೂಗಳನ್ನು ಇಲ್ಲಿಯವರೆಗೂ ಮಂಜೂರೂ ಮಾಡಿಲ್ಲ. ಇದರ ಬಗ್ಗೆ ಕ್ರಮ ಕೈಗೊಂಡು ಕೂಡಲೇ ಹಣ ಮಂಜೂರು ಮಾಡಬೇಕೆಂದು ವಿನಂತಿಸಿದರು.
ಜಿಲ್ಲಾಧಿಕಾರಿಗಳು, ಅಂದಿನ ದಾಖಲೆಗಳನ್ನು ಪರಿಶೀಲಿಸಿ ಈ ಕುರಿತಂತೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ್, ತಹಸೀಲ್ದಾರ ವಾಸುದೇವ ಸ್ವಾಮಿ, ಮುಖ್ಯಾಧಿಕಾರಿ ಮಹೇಶ ಹಡಪದ, ಶರಣು ಗೋಡಿ, ಶಂಕರ ಗೋಡಿ, ಪ್ರಕಾಶ ಮುಳಗುಂದ ಮುಂತಾದವರಿದ್ದರು.
ಇದಕ್ಕೂ ಮುನ್ನ ತಾಲೂಕ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ತಹಸೀಲ್ದಾರ ವಾಸುದೇವಸ್ವಾಮಿ ಹಾಗೂ ಸಿಬ್ಬಂದಿಗಳು ಸ್ವಾಗತಿಸಿದರು. ಈ ವೇಳೆ ತಾಲೂಕಿನ ಸಂಕ್ಷಿಪ್ತ ಮಾಹಿತಿ, ಗ್ರಾಮಗಳು, ನಾಡಕಚೇರಿ, ಕಚೇರಿ ಸಿಬ್ಬಂದಿಗಳು, ಮುಖ್ಯವಾದ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು. ಸಿಬ್ಬಂದಿಗಳೊಂದಿಗೆ ಮಾತನಾಡಿ ಸಲಹೆ ನೀಡಿದರು. ಕಂದಾಯ ಅಧಿಕಾರಿ ಬಿ.ಎಂ. ಕಾತ್ರಾಳ ಇದ್ದರು.