ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಮಹಸೀಲು ಮಾರಾಟ ಮಾಡಿದ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಕಿ ಬೆಂಗಳೂರಿಗೆ ತೆರಳಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ 2053 ಮೆಟ್ರಿಕ್ ಟನ್ ಶೇಂಗಾವನ್ನು ಬೆಂಬಲ ಬೆಲೆ(6783 ರೂ) ಯೋಜನೆಯಡಿ ಖರೀದಿಸಿ 2 ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಗದಗ ಜಿಲ್ಲೆಯಿಂದಲೇ 1464 ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಶೇಂಗಾ ಬೆಲೆ ಬಹಳಷ್ಟು ಕಡಿಮೆ ಇರುವ ಸಂದರ್ಭದಲ್ಲಿ ಬೆಂಬಲ ಬೆಲೆ ಯೋಜನೆ ರೈತರಿಗೆ ಆಸರೆಯಾಗಿದೆ. ಆದರೆ ಖರೀದಿ ಪ್ರಕ್ರಿಯೆ ಬಳಿಕ ಮರ‍್ನಾಲ್ಕು ದಿನಗಳಲ್ಲಿ ಡಿಬಿಟಿ ಮೂಲಕ ರೈತ ಖಾತೆಗೆ ಹಣ ಜಮೆ ಮಾಡುವ ನಿಯಮವಿದೆ. ಹತ್ತಿ, ಕಡಲೆ ಇತರೇ ಬೆಳೆಗಳನ್ನು ಬೆಂಬಲ ಬೆಲೆಯಡಿ ಮಾರಾಟ ಮಾಡಿದ 8/10 ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಆದರೆ ಎಣ್ಣೆಬೀಜದ ಬೆಳೆಗಳಾದ ಶೇಂಗಾ, ಕುಸುಬೆ ಬೆಳೆ ಮಾರಾಟ ಮಾಡಿ ತಿಂಗಳುಗಳೇ ಕಳೆದರೂ ರೈತರ ಖಾತೆಗೆ ಹಣ ಜಮೆಯಾಗದೇ ಸಂಕಷ್ಟ ಅನುಭವಿಸುವುದು ಪ್ರತಿವರ್ಷದ ಸಮಸ್ಯೆಯಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ರೈತರು ಬ್ಯಾಂಕಿನ ಸಾಲ ಮರುಪಾವತಿಸಬೇಕು. ಜಮೀನು ವ್ಯವಹಾರ ಸೇರಿ ಹಣಕಾಸಿನ ಅಗತ್ಯತೆ ಸಾಕಷ್ಟಿರುತ್ತದೆ. ಆದ್ದರಿಂದ ಆದಷ್ಟು ಬೇಗ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಖುದ್ದಾಗಿ ಅಧಿಕಾರಿಗೆ ಮನವಿ ಮಾಡಿದರು.
ಇದಕ್ಕೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮುಖ್ಯ ವ್ಯವಸ್ಥಾಪಕರಾದ ಚಂದ್ರಕಾAತ ಪಾಟೀಲ ಅವರು ತಕ್ಷಣದಲ್ಲಿಯೇ ಸಂಬಂಧಪಟ್ಟ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕರಿಗೆ ರೈತರ ಮನವಿಯನ್ವಯ ಪತ್ರ ಬರೆದು ರೈತರ ಮನವಿ ಸ್ಪಂದಿಸುವ ಕೆಲಸ ಮಾಡಿದ್ದಾರೆ.