ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಬ್ದುಲ್ ಕಲಾಂ ಶಾದಿ ಮಹಲ್ ಹತ್ತಿರದ ರೇಲ್ವೇ ಕೆಳ ಸೇತುವೆಯ ರಸ್ತೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಗದಗ-ಬೆಟಗೇರಿಯ ಸಾರ್ವಜನಿಕರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ರಸ್ತೆ ಸಂಚಾರದಿಂದ ತೊಂದರೆಗೆ ಒಳಗಾದ ಅವಳಿ ನಗರದ ಸಾರ್ವಜನಿಕರು ರವಿವಾರ ನಗರಕ್ಕೆ ಆಗಮಿಸಿದ್ದ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮಗಾದ ಸಮಸ್ಯೆಯನ್ನು ನಿವೇದಿಸಿಕೊಂಡರು.
ಗದಗ-ಬೆಟಗೇರಿ ಅವಳಿ ನಗರಕ್ಕೆ ಮೂರು ರೇಲ್ವೇ ಕೆಳಸೇತುವೆ ಇದ್ದು, ಮೂರೂ ಕೆಳಸೇತುವೆಗಳು ವಾಟರ್ ಬೇಸ್ ಸೇತುವೆಗಳಾಗಿವೆ. ಜನಸಂಖ್ಯೆ ಬೆಳೆಯುತ್ತಾ ಹೋದಂತೆ ಹಳೇ ಕೋರ್ಟ್ ಹಾಗೂ ಬಳ್ಳಾರಿ ಗೇಟ್ ಬಳಿಯ ಕೆಳಸೇತುವೆಗೆ ಡಾಂಬರ್ ರಸ್ತೆ ಮಾಡಿ ಸಂಚಾರಕ್ಕೆ ಅನುಕೂಲ ಒದಗಿಸಲಾಗಿದೆ.
ಅಬ್ದುಲ್ ಕಲಾಂ ಶಾದಿ ಮಹಲ್ ಹತ್ತಿರದ ಡಬಲ್ ಅಂಡರ್ ಪಾಸ್ ಸೇತುವೆ ಇದ್ದು, ಒಂದರಲ್ಲಿ ನೀರು ಇನ್ನೊಂದರಲ್ಲಿ ಸುಮಾರು 50 ವರ್ಷಗಳಿಂದ ಜನಸಂಚಾರ ಮಾಡುತ್ತ ಬಂದಿದ್ದಾರೆ. ಆದರೆ ಈಗ ಅದನ್ನು ತಿಂಗಳ ಹಿಂದೆ ರಾತ್ರೋರಾತ್ರಿ ಹಳಿ ಹಾಕಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ಈ ಕೆಳ ಸೇತುವೆಯಿಂದ 300 ಮೀಟರ್ ಅಂತರದಲ್ಲಿ 50 ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆಯಿದ್ದು, ಈ ಆಸ್ಪತ್ರೆಗೆ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಚಕ್ಕಡಿಗಳೊಂದಿಗೆ ರೈತರು ತಮ್ಮ ಜಮೀನುಗಳಿಗೆ ಹೋಗಲು, ಕೂಲಿಕಾರ್ಮಿಕರಿಗೆ ಸಂಚರಿಸಲು ಇದೇ ಮಾರ್ಗವನ್ನು ಬಹು ವರ್ಷಗಳಿಂದ ಅವಲಂಬಿಸಿದ್ದಾರೆ.
ಆಸ್ಪತ್ರೆಗೆ ಹೋಗುವ ಅಂಬ್ಯುಲೆನ್ಸ್, ಸ್ಕೂಲ್ ಬಸ್ ಹಾಗೂ ಲಘು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಪತ್ರದಲ್ಲಿ ವಿನಂತಿಸಿಕೊಟ್ಟರು.
ಈ ಸಂದರ್ಭದಲ್ಲಿ ಬಸವನಗುಡಿ ಬಡಾವಣೆಯ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಕಾರ್ಯದರ್ಶಿ ಹರೀಶ್ ಪೂಜಾರ, ಎಸ್.ಎನ್. ಟಕ್ಕೇದ, ವ್ಹಿ.ಎ. ಸೋನಾರ, ಶ್ರೀಧರ ಹಾಳಕೇರಿ, ಶಿವು ಹಿರೇಮನಿಪಾಟೀಲ, ಸತೀಶ್ ಪೂಜಾರ, ಬಸವರಾಜ ಚನ್ನಪ್ಪಗೌಡರ, ಫಕ್ಕೀರಪ್ಪ ನಾಲ್ವಾಡ, ಶೇಖಪ್ಪ ಹಡಪದ, ಬಸವರಾಜ ಜಲ್ಲಿ, ಸಿದ್ಧರಾಮಯ್ಯ ಮಾಕಾಪೂರ, ಶಿವಾನಂದ ಪತ್ತಾರ, ಹನಮಪ್ಪ ಹದ್ಲಿ, ಮಹಾದೇವಪ್ಪ ಚಿಕ್ಕಣ್ಣವರ, ವ್ಹಿ.ವ್ಹಿ. ಮಠದ, ಗೂಳಪ್ಪ ರೊಟ್ಟಿ, ಪ್ರಭುಗೌಡ ಬೂದೇಶ, ತೋಂಟದಾರ್ಯ ಬೂಸ್ತ, ಬೆಟಗೇರಿ ರೈತ ಸಂಘದ ಅಧ್ಯಕ್ಷ ಅಜ್ಜನಗೌಡ ಹಿರೇಮನಿಪಾಟೀಲ, ರಾಘವೇಂದ್ರ ಯಳವತ್ತಿ, ಮಹೇಶ ಕೋಟಿ ಮುಂತಾದವರಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಈ ಕುರಿತು ರೇಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.



