ವಿಜಯಸಾಕ್ಷಿ ಸುದ್ದಿ, ಗದಗ: ಫೆಬ್ರವರಿ 14ರಂದು ‘ವ್ಯಾಲಂಟೈನ್ ಡೇ’ ಆಚರಿಸುವ ಪಾಶ್ಚಾತ್ಯರ ಕೆಟ್ಟ ರೂಢಿ ಭಾರತದಲ್ಲಿಯೂ ವ್ಯಾಪಕವಾಗಿ ಹರಡಿದೆ. ಪಾಶ್ಚಾತ್ಯರು ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಯುವ ಪೀಳಿಗೆ ಅನೈತಿಕತೆಯತ್ತ ಸಾಗುತ್ತಿದೆ. ‘ವ್ಯಾಲಂಟೈನ್ ಡೇ’ ಹಿನ್ನೆಲೆಯಲ್ಲಿ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವ್ಯಾಲಂಟೈನ್ ಡೇ ವೇಳೆ ಪಾರ್ಟಿಗಳಲ್ಲಿ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುವುದು ಬೆಳಕಿಗೆ ಬಂದಿದೆ. ಯುವತಿಯರನ್ನು ಪ್ರಭಾವಿತರನ್ನಾಗಿಸಲು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರು ‘ಲವ್ ಜಿಹಾದ್’ ಮೂಲಕ ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಫೆಬ್ರವರಿ 14ರಂದು ನಗರದಲ್ಲಿ ವಿಶೇಷ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ವಿಶೇಷ ಹೆಲ್ಪ್ಲೈನ್ ನಂಬರ್‌ನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ರಾಣಿ ಚಂದಾವರಿ, ಮಹೇಶ್ ಜಾದವ, ಭೀಮಸಿ ಗೋಕಾವಿ, ಹಿಂದೂ ಜನಜಾಗೃತಿ ಸಮಿತಿಯ ಡಾ. ರವಿ ನಂದಿ, ಲಕ್ಷ್ಮೀ ಇತರರು ಉಪಸ್ಥಿತರಿದ್ದರು.



