ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನಗರದ ರಸ್ತೆಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿರ್ಮೂಲನಾ ವೇದಿಕೆಯಿಂದ ನಗರ ಸಭೆ ನೂತನ ಅಧ್ಯಕ್ಷ ಅಮ್ಜದ್ ಪಟೇಲರಿಗೆ ಮನವಿ ಅರ್ಪಿಸಿದರು.
ಅವಳಿ ನಗರಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಂದರೂ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ನಾಗರಿಕರಿಗೆ ತಲುಪುತ್ತಿಲ್ಲ. ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಬಡಾವಣೆಗಳ ರಸ್ತೆಗಳಲ್ಲಿ ಅಲ್ಲಲ್ಲಿ ತೆಗ್ಗುಗಳು ಬಿದ್ದಿದ್ದು, ಕೆಲವು ಕಡೆ ಅವೈಜ್ಞಾನಿಕವಾಗಿ ರಸ್ತೆಗಳಲ್ಲಿ ಉಬ್ಬುಗಳನ್ನು ಸೃಷ್ಟಿಸಿರುವುದರಿಂದ ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಅಪಾಯಕಾರಿಯಾಗಿವೆ. ತಕ್ಷಣ ದುರಸ್ತಿಗೊಳಿಸಬೇಕು ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ, ಮುಖಂಡ ಮೌಲಾ ಹುಸೇನ್ ಹಣಗಿ, ನಾಗರಾಜ್ ಯಾದವ್, ಆದಿತ್ಯ ಟಿ.ಪಾತ್ರೋಟಿ ಮುಂತಾದವರು ಒತ್ತಾಯಿಸಿದರು.