ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ವಾರ್ಡ್ ನಂ.23ರ ವ್ಯಾಪ್ತಿಗೆ ಬರುವ ಮಂಜಲಾಪೂರದಲ್ಲಿನ ಸಾರ್ವಜನಿಕರು ಕಳೆದ 30 ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದು, ಕೂಡಲೇ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಮತ್ತು ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನ ಸೇನೆಯ ತಾಲೂಕಾಧ್ಯಕ್ಷ ನಾಗೇಶ ಅಮರಾಪೂರ, ವಾರ್ಡ್ ನಂ.23ರ ಮಂಜಲಾಪೂರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಸುಮಾರು 30 ವರ್ಷಗಳಿಂದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ನಿತ್ಯ ಪರದಾಡುತ್ತಿದ್ದಾರೆ. ಈ ಬಗ್ಗೆ ಪುರಸಭೆಗೆ ಅಲ್ಲಿನ ನಿವಾಸಿಗಳು ಹಲವಾರು ಬಾರಿ ಮನವಿ ಅರ್ಪಿಸಿದ್ದರೂ ಸಹ ಯಾವುದೇ ಕ್ರಮಗಳಾಗುತ್ತಿಲ್ಲ. ಇಲ್ಲಿ ಜನರಿಗೆ ಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಮಹಿಳೆಯರಿಗೆ ಸುಲಭ ಶೌಚಾಲಯದ ವ್ಯವಸ್ಥೆ, ರಸ್ತೆ, ಚರಂಡಿ, ಸಾರ್ವಜನಿಕ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪಗಳ ನಿರ್ವಹಣೆ ಅವಶ್ಯವಾಗಿದೆ.
ಕೂಡಲೇ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು. ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಮನವಿ ಸ್ವೀಕರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ಪುರಸಭೆ ಸದಸ್ಯರಾದ ರಾಜಣ್ಣ ಕುಂಬಿ, ವಿಜಯ ಕರಡಿ, ಎಸ್.ಕೆ. ಹವಾಲ್ದಾರ, ರಾಮಣ್ಣ ಗಡದವರ, ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಕಾರ್ಮಿಕ ಘಟಕ ಪ್ರ. ಕಾರ್ಯದರ್ಶಿ ಮೈನು ಮನಿಯಾರ, ಕೈಸರ ಮಹ್ಮದಅಲಿ, ಅಷ್ಪಾಕ ಬಾಗೋಡಿ, ಗೌಸ ಜಮಖಂಡಿ, ನವೀನ ಉಮಚಗಿ, ಮಹಮ್ಮದಅಲಿ ಶಿಗ್ಗಾಂವ, ಹಜರತ್ ಅಲಿ ಮನಿಯಾರ, ಇಲಿಯಾಸ ಮನಿಯಾರ, ನಿಹಾಲ್ ಕುದುರಿ, ಸುಲೇಮಾನ್ ಶಿರೂರ, ಅಷ್ಪಾಕ ಮನಿಯಾರ, ಇರ್ಫಾನ್ ಮನಿಯಾರ, ಖಾಲಿದ ಬಂಕಾಪುರ, ಗೌಸ ಯರಗಟ್ಟಿ, ಸಾದಿಕ್ ನೀರಲಗಿ ಮುಂತಾದವರಿದ್ದರು.