ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್ ಸಂಸ್ಥೆಗೆ ಚುನಾವಣೆ ಘೋಷಣೆಯಾಗಿದ್ದು, ದಿನಾಂಕ ಸೆಪ್ಟೆಂಬರ್ 8ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಚುನಾವಣೆಗೆ ಚುನಾವಣಾ ಅಧಿಕಾರಿಗಳಾಗಿ ನಿಯೋಜನೆಗೊಂಡ ವಕ್ಫ್ ಬೋರ್ಡ್ ಅಧಿಕಾರಿಗಳು ಕರ್ನಾಟಕ ರಾಜ್ಯಪತ್ರದ ಆದೇಶವನ್ನು ಉಲ್ಲಂಘಿಸಿ ಠೇವಣಿ ಮೊತ್ತವನ್ನು 10 ಸಾವಿರ ರೂಪಾಯಿಗಳಿಗೆ ನಿಗದಿಪಡಿಸಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಆದರೆ, ಅಂಜುಮನ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 1 ಸಾವಿರ ರೂಗಳನ್ನು ಪಾವತಿಸುವಂತೆ ನಿರ್ದೇಶನವಿದೆ. ಈ ಎಲ್ಲ ವಿಷಯವನ್ನು ಚುನಾವಣಾಧಿಕಾರಿಗಳಿಗೆ ಮನವರಿಕೆ ಮಾಡಿದರೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಅಂಜುಮನ್ ಸಂಸ್ಥೆಯ ಸದಸ್ಯರು, ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪತ್ರದಲ್ಲಿ ಆದೇಶಿಸಿದಂತೆ 1 ಸಾವಿರ ರೂಪಾಯಿಗಳನ್ನು ಮಾತ್ರ ನಿಗದಿಪಡಿಸಿ ಚುನಾವಣೆ ನಡೆಸುವಂತೆ ವಕ್ಫ್ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಎಂ.ಇಸ್ಮಾಯಿಲ (ಮಾಳೆಕೊಪ್ಪ), ಹಾಜಿಅಲಿ ಎಚ್.ಕೊಪ್ಪಳ, ಬಿಲಾಲ ಗೋಕಾವಿ, ಅನ್ವರ ಬಾಗೇವಾಡಿ, ಸಲೀಂಸಾಬ ಶಹಾಪುರ, ಸಿರಾಜ ಕದಡಿ, ಅಬ್ದುಲರಸೂಲ ಬಳ್ಳಾರಿ, ರಾಜೇಸಾಬ ತಹಸೀಲ್ದಾರ, ಮಾಬುಸಾಬ ಹುಲ್ಲೂರ, ತೌಫಿಕ ಮಜಿಗಿ, ಇಕ್ಬಾಲ ಬೇಪಾರಿ, ಇಸ್ಮಾಯಿಲ ಅಣ್ಣಿಗೇರಿ, ಮೆಹಬೂಬ ಕದಡಿ, ಅನ್ವರ ಮುಲ್ಲಾ, ಹಿದಾಯತುಲ್ಲಾ ಕಾಗದಗಾರ ಸೇರಿದಂತೆ ಅಂಜುಮನ್ ಸಂಸ್ಥೆಯ ಸದಸ್ಯರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.


