ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಡಿ. 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವದಾಗಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರರಿಗೆ ಜಿಲ್ಲಾ ಪೌರ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಪೌರ ನೌಕರರ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರು ಮಾತನಾಡಿ, ಗದಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ನ. 9ರಂದು ಕೊಪ್ಪಳದಲ್ಲಿ ಪದಾಧಿಕಾರಿಗಳ ರಾಜ್ಯ ಪರಿಷತ್ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ನಾವು ಹಂತ ಹಂತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಅದರಂತೆ ಮೇ. 30ರಂದು ಪೌರಾಡಳಿತ ಹಾಗೂ ಹಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಯಂತೆ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸದೇ ಹೋದರೆ ರಾಜ್ಯ ಪರಿಷತ್ ಸಭೆಯ ತೀರ್ಮಾನದಂತೆ ಡಿ. 5ರಿಂದ ಗದಗ ಜಿಲ್ಲಾದ್ಯಂತ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಕಚೇರಿ ಕೆಲಸ, ಎಲ್ಲಾ ವಿಧದ ನೈರ್ಮಲ್ಯ ಕಾರ್ಯವನ್ನು ಒಳಗೊಂಡಂತೆ ಮತ್ತು ನೀರು ಸರಬರಾಜು ಸೇರಿ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಿ ನಮ್ಮ ನಮ್ಮ ಕಾರ್ಯಾಲಯದ ಮುಂದೆ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಅನಿರ್ದಿಷ್ಟ ಕಾಲ ಮುಷ್ಕರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆಂಚಪ್ಪ ಪೂಜಾರ್, ಶಾಖಾಧ್ಯಕ್ಷ ಚಂದ್ರು ಹಾದಿಮನಿ, ಹೇಮೇಶ್ ಹೆಟ್ಟಿ, ನಾಗೇಶ್ ಬಳ್ಳಾರಿ, ಅರವಿಂದ್ ಕುರ್ತಕೋಟಿ, ರಮೇಶ ಬಾರಕೇರ, ರವಿ ಕುಂಬಾರ, ಪರಶುರಾಮ್ ಸಣ್ಣತಮ್ಮಣ್ಣವರ, ಮುದಕಪ್ಪ ಬಚೆನಳ್ಳಿ, ಮಹಾಂತಪ್ಪ ದಿವಟರ್, ದಾವಲಪ್ಪ, ನದಾಫ್ ಸೇರಿದಂತೆ ಪೌರ ನೌಕರರು ಉಪಸ್ಥಿತರಿದ್ದರು.



