ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಸರಕಾರದ ಗಮನಕ್ಕೆ ತರಲು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಜನಸಾಮಾನ್ಯರ ವೇದಿಕೆ ವತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜನಸಾಮಾನ್ಯರ ವೇದಿಕೆಯ ರಾಜ್ಯ ಸಂಚಾಲಕ ಯಲ್ಲಪ್ಪ ಹಗಡೆ ಮಾತನಾಡಿ, ಬೀದರಿನಿಂದ ಬೆಂಗಳೂರಿನವರೆಗೆ ಯುವ ಪರಿವರ್ತನೆ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಪ್ರಮುಖ ಬೇಡಿಕೆಗಳಾದ ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು, ಪೂರ್ಣ ಪ್ರಮಾಣದ ವಿಷಯವಾರು ಶಿಕ್ಷಕರನ್ನು ನೇಮಕ ಮಾಡುವುದು, ಡಿಜಿಟಲ್ ಪಾರದರ್ಶಕತೆ ಅಳವಡಿಸಿಕೊಂಡು ಭ್ರಷ್ಟಾಚಾರ ಮುಕ್ತ ನೇಮಕಾತಿ ಕೈಗೊಳ್ಳುವುದು, ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಮೀಸಲಾತಿ ಮತ್ತು ಎಲ್ಲಾ ಹುದ್ದೆಗಳಲ್ಲಿ ಸ್ಥಳೀಯರಿಗೆ ಪ್ರಾಮುಖ್ಯತೆ ಕಲ್ಪಿಸುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈಗಾಗಲೇ ಮೀಸಲಾತಿ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಎಸ್.ಸಿ/ಎಸ್‌ಟಿ ಮತ್ತು 2ಎ ವರ್ಗಕ್ಕೆ ನೀಡಲಾಗಿದೆ. ಸಮಗ್ರ ಅನುಷ್ಠಾನಕ್ಕೆ ಕಾಮಗಾರಿಯಲ್ಲಿ ಕೆಲಸಗಳ ಮತ್ತು ಸೇವಾ ಕಾರ್ಯಗಳನ್ನು ವಿಲೀನಗೊಳಿಸಿ ಮೀಸಲಾತಿ ತಪ್ಪಿಸುವ ಕೆಲಸ ನಡೆದಿದ್ದು, ಎಲ್ಲ ಇಲಾಖೆಗಳಲ್ಲಿ ನಿಯಮ ಉಲ್ಲಂಘನೆ ಮತ್ತು ಮೀಸಲಾತಿ ವರ್ಗಕ್ಕೆ ಅನ್ಯಾಯವಾಗದಂತೆ ಸರಿಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮುಂತಾದವರು ಉಪಸ್ಥಿತರಿದ್ದರು.



