ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಕೆಲ ವರ್ಷಗಳೇ ಕಳೆದಿದೆ. ಆದರೆ ಇಂದಿಗೂ ಅಪ್ಪು ಅವರನ್ನು ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ನೆನೆಯುತ್ತಲೆ ಇರುತ್ತಾರೆ. ಅಪ್ಪು ನಿಧನರಾಗಿದ್ದವರು ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಇದೆ. ಅಪ್ಪು ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಅದ್ಭುತ ವ್ಯಕ್ತಿತ್ವ, ಸೇವೆಯ ಕಾರಣಗಳಿಂದಾಗಿ ಕೋಟ್ಯಂತರ ಜನರಿಗೆ ಹತ್ತಿರವಾಗಿದ್ದರು. ಇದೀಗ ಅಪ್ಪು ಅವರನ್ನು ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಾರ್ಯವೊಂದನ್ನು ಕೈಗೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಲಿಕೇಶನ್ ಒಂದನ್ನು ಹೊರತರಲು ಸಜ್ಜಾಗಿದ್ದಾರೆ. ಕೆಲ ಉತ್ಸಾಹಿ ತಂಡದೊಂದಿಗೆ ಈಗಾಗಲೇ ಅಪ್ಲಿಕೇಶನ್ ಒಂದನ್ನು ರೂಪಿಸಿದ್ದು ಶೀಘ್ರವೇ ಅದನ್ನು ಲೋಕಾರ್ಪಣೆ ಮಾಡಲು ಮುಂದಾಗಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್ಗೆ ‘ಪಿಆರ್ಕೆ’ ಎಂದು ಹೆಸರಿಡಲಾಗಿದ್ದು, ಅಪ್ಪು ಅವರ ಪುಣ್ಯ ಸ್ಮರಣೆಯ ದಿನವಾದ ಅಕ್ಟೋಬರ್ 29ರಂದು ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಈ ಅಪ್ಲಿಕೇಶನ್ ಮೂಲಕ ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದಾಗಿದ್ದಾರೆ. ಈ ಅಪ್ಲಿಕೇಶನ್ನ ಲೋಕಾರ್ಪಣೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರನ್ನೂ ಸಹ ಆಹ್ವಾನಿಸುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿರುವ ಜೊತೆಗೆ, ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಸಹ ಈ ಅಪ್ಲಿಕೇಶನ್ ಒಳಗೊಂಡಿರುವ ಸಾಧ್ಯತೆ ಇದೆ.



