ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಗೆ ಖಾಯಂ ಪೌರಾಯುಕ್ತರಿಲ್ಲದೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಶೀಘ್ರವೇ ಖಾಯಂ ಪೌರಾಯುಕ್ತರನ್ನು ನೇಮಿಸದಿದ್ದರೆ ಅಕ್ಟೋಬರ್ 3ರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರಸಭೆ ಪೌರಾಯುಕ್ತರಿಲ್ಲದೆ ಸ್ವಚ್ಛತೆ ಕನಸಾಗಿದೆ. ಕೆಳ ಹಂತದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ.
ಕಟ್ಟಡ ಪರವಾನಗಿ, ಫಾರ್ಮ್ ನಂ. 3ರ ವಿತರಣೆಯಲ್ಲ್ಯಿನಗತ್ಯ ವಿಳಂಬವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳನ್ನೂ ಗಂಭೀರವಾಗಿ ಪರಿಣಿಸುತ್ತಿಲ್ಲ ಎಂದು ಆರೋಪಿಸಿದರು.
ಜನಸಾಮಾನ್ಯರು ಸರಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ರೈತರ ಕಲ್ಯಾಣ ಹಮ್ಮಿಕೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಮೇಶ ಹುಣಸಿಮರದ, ಜೋಸೆಫ್ ಉದೋಜಿ, ಪ್ರಫುಲ್ ಪುಣೇಕರ, ಎಂ.ಎಸ್. ಪರ್ವತಗೌಡ್ರ, ನಿಂಗರಾಜ ಪ್ಯಾಟಿ, ಮಹಾಂತೇಶ ಕಣವಿ, ಜಿ.ಎಂ. ಸಂಶಿ, ಸಂತೋಷ ಪಾಟೀಲ, ಜಿ.ಕೆ. ಕೊಳ್ಳಿಮಠ ಇತರರು ಉಪಸ್ಥಿತರಿದ್ದರು.
ಜೆಡಿಎಸ್ ಗದಗ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಅಪ್ಪಣ್ಣವರ ಮಾತನಾಡಿ, ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲು ಇದೇ ಸೆ.25ರಂದು ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ. ಗದಗ ಮತಕ್ಷೇತ್ರದಲ್ಲಿ 50 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ. ಅಭಿಯಾನದ ನಂತರ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿ ಬೃಹತ್ ಸಮಾವೇಶ ನಡೆಸಿ ಪಕ್ಷಕ್ಕೆ ಹೊಸ ಚೈತನ್ಯ ತುಂಬಲಾಗುತ್ತದೆ ಎಂದು ತಿಳಿಸಿದರು.