ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಸಾವಿರ ಕಿರಿಯ ತರಬೇತಿ ಅಧಿಕಾರಿಗಳು, ತರಬೇತಿ ಅಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸುವುದು, ಸ್ವಯಂ ನಿವೃತ್ತಿ ಹೊಂದಲು ಅನುಮತಿ ನೀಡುವುದು, ನಿವೃತ್ತಿ ಸಂದರ್ಭದಲ್ಲಿ ನೀಡಬೇಕಾದ ಅಂತಿಮ ರಜೆ ನಗದೀಕರಣ ಮುಂತಾದ ಎಲ್ಲ ಬೇಡಿಕೆಗಳಿಗೆ ಒಂದೆರಡು ತಿಂಗಳ ಒಳಗಾಗಿ ಸೂಕ್ತ ಆದೇಶ ಜಾರಿ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಹಾಗೂ ಐಟಿಐ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್. ರವಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ವಿಕಾಸ ಸೌಧದ ಕೊಠಡಿಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲರ ಅಧ್ಯಕ್ಷತೆಯಲ್ಲಿ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ರಾಜ್ಯ ಅನುದಾನಿತ ಖಾಸಗಿ ಐಟಿಐ ನೌಕರರ ಸಂಘದ ಪದಾಧಿಕಾರಿಗಳ ಹಾಗೂ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರ ಜೊತೆ ಸುದೀರ್ಘವಾಗಿ ಸಭೆ ನಡೆಸಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ವಿ.ಪ ಸದಸ್ಯರಾದ ಪುಟ್ಟಣ್ಣ, ಶಶೀಲ ನಮೋಶಿ, ಹನುಮಂತ ನಿರಾಣಿ, ಶಾಸಕ ಶ್ರೀವತ್ಸ, ಪದಾಧಿಕಾರಿ ಕೆ.ಎನ್. ಶಶಿಧರ್ ಮುಂತಾದವರು ಹಾಜರಿದ್ದರು ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಹಾಗೂ ಐಟಿಐ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್. ರವಿ ತಿಳಿಸಿದ್ದಾರೆ.
ಸಚಿವರು ಮಾತನಾಡಿ, ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿಗೆ ಒದಗಿಸಬೇಕಾದ ಎಲ್ಲಾ ಸೇವಾ ಭದ್ರತೆ ಹಾಗೂ ಸೇವಾ ಸೌಲಭ್ಯಗಳನ್ನು ಒದಗಿಸಲು ಅನುದಾನ ಸಂಹಿತೆಗೆ ಈಗಾಗಲೇ ಪರಿಷ್ಕರಣೆ ಮಾಡಿ ಒಪ್ಪಿಗೆ ನೀಡಿದ್ದು, ಒಂದೆರಡು ತಿಂಗಳಿನಲ್ಲಿ ಆದೇಶ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ನಿವೃತ್ತಿ ಹಾಗೂ ನಿಧನದಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಲು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.