ಬೆಂಗಳೂರು: ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ಕನ್ನಡದ ಕಂಪು ಹರಿದಾಡಿದೆ.
ಅದರಂತೆ ನ.1 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಮ್ಮ ಮೆಟ್ರೋದ ನಗರದ ಗ್ರೀನ್ ಲೈನ್‌ನಲ್ಲಿ ಸಂಚರಿಸುತ್ತಿರುವ ಒಂದು ವಿಶೇಷ ರೈಲು ಸಂಪೂರ್ಣವಾಗಿ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳಿಂದ ಕಂಗೊಳಿಸುತ್ತಿದೆ. ಈ ರೈಲಿನ ಬೋಗಿಗಳ ಮೇಲೆ ಪುನೀತ್ ಅವರ ನಗುಮುಖದ ಚಿತ್ರಗಳು, ಕನ್ನಡ ಬಾವುಟ, “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂಬ ಘೋಷವಾಕ್ಯಗಳು, ಹಾಗೂ “ಗಂಧದಗುಡಿ” ಚಿತ್ರದ ಪೋಸ್ಟರ್ ಅಂಟಿಸಲಾಗಿದೆ.
ಈ ವಿಶಿಷ್ಟ ವಿನ್ಯಾಸವನ್ನು ಪೀಣ್ಯಾ ಡಿಪೋದಲ್ಲಿ ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್‌ಡೋರ್ ಸಂಸ್ಥೆಗಳು ರೂಪಿಸಿದ್ದು, ಇವು ಬಿಎಂಆರ್‌ಸಿಎಲ್‌ನೊಂದಿಗೆ ಜಾಹೀರಾತು ಹಕ್ಕುಗಳ ಒಪ್ಪಂದ ಮಾಡಿಕೊಂಡಿವೆ.
ಅಪ್ಪು ಭಾವಚಿತ್ರವಿರುವ ಮೆಟ್ರೋ ನಾಗಸಂದ್ರದಿಂದ ಸಿಲ್ಕ್ ಬೋರ್ಡ್‌ವರೆಗೆ ಸಂಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬಿಎಂಆರ್‌ಸಿಎಲ್‌ನ ಕನ್ನಡ ಪ್ರೀತಿ ಹಾಗೂ ಪುನೀತ್ ಅಭಿಮಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


