ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕ ನಟನಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ ಅಪ್ಪು ಸಿನಿಮಾ ಇಂದು ರಾಜ್ಯಾದ್ಯಂತ ಮರು ಬಿಡುಗಡೆ ಆಗುತ್ತಿದೆ. ಅಪ್ಪು ಸಿನಿಮಾವನ್ನು ಮತ್ತೊಮ್ಮೆ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದು ಈಗಾಗಲೇ ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ಮಾರ್ಚ್ 17 ರಂದು ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಮೂರು ದಿನ ಮೊದಲೇ ಅವರ ಸಿನಿಮಾವನ್ನ ರೀ ರಿಲೀಸ್ ಮಾಡಲಾಗುತ್ತಿದೆ. 23 ವರ್ಷಗಳ ನಂತರ ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಮತ್ತೆ ತೆರೆ ಮೇಲೆ ಬರುತ್ತಿದ್ದು, ಪುನೀತ್ ರಾಜ್‍ಕುಮಾರ್ ಸಿನಿಮಾ ಥಿಯೇಟರ್ನಲ್ಲಿ ನೋಡುವ ಅವಕಾಶ ಮತ್ತೆ ಸಿಕ್ಕಿರುವುದು ಅಭಿಮಾನಿಗಳ ಸಂತಸ ಮುಗಿಲು ಮುಟ್ಟುವಂತೆ ಮಾಡಿದೆ.
ರಾಜ್ಯಾದ್ಯಂತ ಇರುವ 100ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಅಪ್ಪು ಸಿನಿಮಾ ಇಂದು ಮರು ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಜಾಕಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿತ್ತು. ಇದಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದರಿಂದ ದಾಖಲೆ ಮಟ್ಟದಲ್ಲಿ ಹಣ ಸಂಗ್ರಹ ಮಾಡಿತ್ತು. ಇದೀಗ ಅಪ್ಪು ಸಿನಿಮಾವನ್ನು ಇಂದು ರೀ ರಿಲೀಸ್ ಮಾಡಲಾಗುತ್ತಿದೆ. ಎಲ್ಲೆಡೆ ಅಪ್ಪು ಚಿತ್ರದ ರಿಲೀಸ್ ಅಬ್ಬರ ಜೋರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಫೋಟೋಗಳು ವೈರಲ್ ಆಗಿವೆ.
ಅಪ್ಪು ಸಿನಿಮಾ 26 ಏಪ್ರಿಲ್ 2002 ರಂದು ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಅಪ್ಪು ಒಟ್ಟು 200 ದಿನಗಳ ಕಾಲ ಯಶಸ್ವಿ ಅಂದು ಪ್ರದರ್ಶನ ಕಂಡಿತ್ತು.