ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದ ಅರಳು ವಿಶೇಷತೆಯುಳ್ಳ ಮಕ್ಕಳ ವಸತಿ ರಹಿತ ಸಂಸ್ಥೆಯಲ್ಲಿನ ವಿಶೇಷ ಮಕ್ಕಳ ಶೈಕ್ಷಣಿಕ ನಿರ್ವಹಣೆಗಾಗಿ ಪರಮಪೂಜ್ಯ ಶ್ರೀ ವಿರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಸ್ವರೂಪಿ ಹೇಮಾವತಿ ಅಮ್ಮನವರು ನೀಡಿದ 1 ಲಕ್ಷ ರೂಗಳ ಸಹಾಯಧನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಸಂಸ್ಥೆಯ ಮುಖ್ಯಸ್ಥರಿಗೆ ನೀಡಿದರು.
ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲಕ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುನೀತ್ ಚೆಕ್ ವಿತರಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದರಲ್ಲಿ ಇಂತಹ ವಿಶೇಷ ಶಾಲೆಗಳಿಗೂ ಸಹಾಯಧನವನ್ನು ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಮಕ್ಕಳ ಪಾಲನೆ-ಪೋಷಣೆಯ ಜೊತೆ ಅವರನ್ನು ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವದು ಅವಶ್ಯವಾಗಿದೆ.
ತಂದೆ-ತಾಯಿಯರು ಮಕ್ಕಳ ಬಗ್ಗೆ ವಹಿಸುವ ಕಾಳಜಿಯಂತೆ ಇಲ್ಲಿನ ಶಿಕ್ಷಕರು ಸಹ ಕಾಳಜಿ ವಹಿಸುತ್ತಿದ್ದು, ಇಲ್ಲಿ ಮಕ್ಕಳಿಗೆ ಉತ್ತಮ ವಾತಾವರಣವಿದೆ. ಅರಳು ಸಂಸ್ಥೆಯ ಕಾರ್ಯ ದೇವರ ಕಾರ್ಯ. ಇಂತಹ ಮಕ್ಕಳ ಸೇವೆಗೆ ಪೂಜ್ಯರು ಪ್ರಸಾದ ರೂಪದಲ್ಲಿ ಒಂದು ಲಕ್ಷ ರೂ ದೇಣಿಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಮುಖಂಡರಾದ ತಿಪ್ಪಣ್ಣ ಸಂಶಿ, ಸೋಮೇಶ್ವರ ವಲಯದ ಮೇಲ್ವೀಚಾರಕ ವೀರಭದ್ರಪ್ಪ ಹಿರೇಮಠ, ಪುರಸಭೆ ಸದಸ್ಯ ರಾಮಣ್ಣ ಗಡದವರ, ಸೂರಣಗಿ ಸೋಮೇಶ್ವರ ವಲಯದ ಮೇಲ್ವಿಚಾರಕರಾದ ಶೃತಿ, ಒಕ್ಕೂಟದ ಉಪಾಧ್ಯಕ್ಷೆ ಶ್ರೀದೇವಿ ಸಂಕನೂರ, ಸೇವಾ ಪ್ರತಿನಿಧಿಗಳಾದ ಗಿರಿಜಾ, ಶೋಭಾ, ಲತಾ, ನಿರ್ಮಲಾ, ವಾಹಿದಾ ಇತರರರು ಹಾಜರಿದ್ದರು.
ವಿಶೇಷ ಶಿಕ್ಷಕರಾದ ಲಲಿತಾ ದಾಸಪ್ಪನವರ, ನೇತ್ರಾ ತಳಗೇರಿ, ಪ್ರಶಾಂತ ಎಸ್.ಬಿ, ಅಕ್ಕಮ್ಮ ಕೊರದಾಳ, ರೂಪಾ ಸಂತಿ, ಹೇಮಾವತಿ ಅಣ್ಣಿಗೇರಿ, ಯಲ್ಲಮ್ಮ ಹೊಸಮನಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯೋಪಾಧ್ಯಾಯೆ ನೀಲಮ್ಮ ದಾಸಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದುಬಂದ ದಾರಿಯನ್ನು ವಿವರಿಸಿ, ಧರ್ಮಸ್ಥಳ ಸಂಸ್ಥೆಯ ಸಹಾಯ ಮಕ್ಕಳಿಗೆ ಪರಿಪೂರ್ಣವಾಗಿ ತಲುಪುವಂತೆ ಕಾಳಜಿ ವಹಿಸುತ್ತೇವೆ. ಇಲಾಖೆಯ ಅನುದಾನದ ಕೊರತೆಯಿಂದ ಸಂಸ್ಥೆ ಆರ್ಥಿಕವಾಗಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದ ಸಂಧರ್ಭದಲ್ಲಿ ನಮಗೆ ಆರ್ಥಿಕವಾಗಿ ನೆರವಿಗೆ ನಿಂತಿದ್ದು ಧರ್ಮಸ್ಥಳ ಸಂಸ್ಥೆಯವರು ಮಾತ್ರ. ಈ ದೇವರ ಮಕ್ಕಳ ಸೇವೆಗೆ, ಇಂತಹ ಸಣ್ಣ ಸಂಸ್ಥೆಯನ್ನು ಸಹ ಪೂಜ್ಯರು ಗಮನಿಸಿ ಸಹಾಯಧನ ನೀಡಿರುವದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.



