ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ವಿತರಿಸಬೇಕಿದ್ದ ಶೇಂಗಾ ಬಿತ್ತನೆ ಬೀಜವನ್ನು ಡಂಬಳ ಹೋಬಳಿಯ ರೈತರಿಗೆ ಸೂಕ್ತ ಮಾಹಿತಿ, ಪ್ರಕಟಣೆಯನ್ನು ನೀಡದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿಜವಾದ ರೈತರಿಗೆ ವಿತರಿಸದೆ, ಗ್ರಾಮದ ಕೆಲ ಶ್ರೀಮಂತ ರೈತರಿಗೆ, ತಮಗೆ ಬೇಕಾದವರಿಗೆ ಮಾತ್ರ ಎಪಿಎಂಸಿಯಲ್ಲಿ ನೀಡಲಾಗಿದೆ ಮತ್ತು ಯಾವುದೇ ಆದೇಶ ಇಲ್ಲದಿದ್ದರೂ ರೈತರಿಗೆ ಬಿಲ್ ಕೂಡಾ ನೀಡದೆ ಸಾವಿರ ರೂಗಳನ್ನು ಪಡೆದುಕೊಂಡು ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ರೈತರು ಕೃಷಿ ಅಧಿಕಾರಿ ಎಸ್.ಬಿ. ರಾಮೇನಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಯಾವುದೇ ಆದೇಶ ಇಲ್ಲದೆ ಇದ್ದರು ಕೂಡಾ ಲಿಂಕ್ ಎಂದು ಹೇಳಿ 1 ಸಾವಿರ ರೂ ಪಡೆದು ಚಿಂಕ್, ಬೋರ್ಯಾಕ್ಸ್, ಟಾನಿಕ್, ಟ್ರೇಕೊಡರ್ಮಾ, ವಿಮಾಮಿಟ್, ಬಿಂಜಾಯಿಟ್ ವಿತರಿಸಿ, ಬಿಲ್ ಕೂಡ ನೀಡದೆ ರೈತರಿಂದ ಹೆಚ್ಚು ಹಣವನ್ನು ಪಡೆದುಕೊಂಡಿದ್ದು, ಹಾಡ ಹಗಲೇ ರೈತರನ್ನು ಲೂಟಿ ಮಾಡಿದ್ದಾರೆ. ಕಡಿಮೆ ಹಿಡುವಳಿ ಇರುವ ರೈತರಿಗೆ 60 ಕೆಜಿ ಕೊಡಬೇಕು. ಆದರೆ, ಇದು ವಿತರಣೆಯಾಗಿಲ್ಲ. ಇದರ ಕುರಿತು ಸೂಕ್ತ ತನಿಖೆಯನ್ನು ಮಾಡಬೇಕು. ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿ ರೈತರಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ರೈತರಾದ ಪ್ರಕಾಶ ಮೇಗೂರ, ಪುಂಡಲೀಕ ಪಾರಪ್ಪನವರ, ಆದಿತ್ಯ ಗದಗಿನ, ಮಲ್ಲಪ್ಪ ಹರಿಜನ, ವಿ.ಆರ್. ಗದಗಿನ, ಬಿ.ಎಸ್. ಮೇಗೇರಿ, ಬಿ.ವಾಯ್. ಯಲಭೋವಿ, ಎಸ್.ಎಮ್. ವಲ್ಲೇನ್ನವರ, ಸೋಯಲ್ ತಾಂಬೋಟಿ, ಬುಡ್ನೆಸಾಬ ಜಲಾಲನವರ, ಶ್ರೀಧರ ಪಲ್ಲೇದ, ಎ.ಎಮ್. ತಾಂಬೋಟಿ, ಭರಮಪ್ಪ ಮಂಗೋಜಿ, ಶ್ರೀಕಾಂತ ಶಿರಿಗೇರಿ ಮುಂತಾದ ರೈತರು ಮನವಿ ಸಲ್ಲಿಸಿದರು.
ತಾಲೂಕಾಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಉಚಿತ ಶೇಂಗಾ ಬಿತ್ತನೆ ಬೀಜವನ್ನು ರೈತರಿಗೆ ನೀಡಲಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪಡೆಯಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಡಂಬಳ ರೈತ ಸಂಪರ್ಕ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ ರೈತರಿಗೆ ವಿವರಿಸಿದರು.
ಡಂಬಳ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಉಚಿತ ಶೇಂಗಾ ಬಿತ್ತನೆ ಬೀಜವನ್ನು ನೀಡಿದ್ದು, 1 ಸಾವಿರ ರೂ ಬೀಜೋಪಚಾರದ ಔಷಧಕ್ಕಾಗಿ ಪಡೆಯಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.
ಪ್ರಾಣೇಶ ಮುಂಡರಗಿ.
ತಾಲೂಕಾ ಕೃಷಿ ಅಧಿಕಾರಿ.
“ಡಂಬಳ ಹೋಬಳಿಯ ಯಾವುದೇ ರೈತರಿಗೆ ಈ ಬಗ್ಗೆ ಸೂಕ್ತ ಮಾಹಿತಿ ತಿಳಿಸಿಲ್ಲ. ನಿಜವಾದ ಫಲಾನುಭವಿಗಳಿಗೆ ಬೀಜ ವಿತರಣೆಯಾಗಿಲ್ಲ. ಸರಕಾರದಿಂದ ಆದೇಶ ಇರದಿದ್ದರೂ ಕೂಡಾ ಬಿಲ್ ನೀಡದೇ ಹಣ ಪಡೆಯಲಾಗಿದೆ ಮತ್ತು ಕಡಿಮೆ ಹಿಡುವಳಿಯ ಕಡು ಬಡವ ರೈತರಿಗೆ ಮಾನ್ಯತೆ ನೀಡದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತೋರಾತ್ರಿ ಉಚಿತ ಬೀಜ ನೀಡಿದ್ದು ಬಹುತೇಕ ಶ್ರೀಮಂತರ ಕೈಸೇರಿದೆ. ಇದರ ಕುರಿತು ಸೂಕ್ತ ತನಿಖೆ ನಡೆಸಬೇಕು”
ಆದಿತ್ಯ ಗದಗಿನ.
ಡಂಬಳ ಗ್ರಾಮದ ಯುವ ರೈತ.



