ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಶುರುವಾದ ಗಲಾಟೆ ಬಳ್ಳಾರಿಯಲ್ಲಿ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಶಾಸಕ ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಪೆಟ್ರೋಲ್ ಬಾಂಬ್ ಎಸೆದಿರುವ ಶಂಕೆಯೂ ವ್ಯಕ್ತವಾಗಿದೆ.
ಘಟನೆಯ ಬಳಿಕ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, “ನಿನ್ನೆ ನಡೆದದ್ದು ನಡೆಯಬಾರದ ಘಟನೆ. ಫೈರಿಂಗ್‌ನಲ್ಲಿ ಯುವಕ ರಾಜಶೇಖರ್ ಪ್ರಾಣ ಕಳೆದುಕೊಂಡಿದ್ದಾನೆ. ಅವನ ಸಾವಿಗೆ ಯಾರು ಕಾರಣರು ಎಂಬುದು ಸತ್ಯಾನ್ವೇಷಣೆಯಿಂದ ಹೊರಬರಬೇಕು” ಎಂದು ಹೇಳಿದರು.
“ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಮಾತಿನ ಚಕಮಕಿ ನಡೆದಿತ್ತು. ಆದರೆ ನಂತರ ಅದು ಕಲ್ಲು ತೂರಾಟ ಮತ್ತು ಗುಂಡಿನ ದಾಳಿಗೆ ತಿರುಗಿದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿಸಿದ ದೃಶ್ಯ ಅವರೇ ತೋರಿಸಿದ್ದಾರೆ” ಎಂದು ತಿಳಿಸಿದರು.
“ಇದು ಪೊಲೀಸ್‌ಗಳಿಂದ ನಡೆದ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಗಳು ಗನ್ ಬಳಸಿದ್ದಾರೆ. ಇಂತಹ ದೌರ್ಜನ್ಯ ಸಹಿಸಲಾಗದು. ಯಾರ ಗನ್‌ನಿಂದ ಬುಲೆಟ್ ಹಾರಿಸಲಾಗಿದೆ ಎಂಬುದನ್ನು ತಕ್ಷಣ ಪತ್ತೆ ಮಾಡಬೇಕು” ಎಂದು ಶ್ರೀರಾಮುಲು ಆಗ್ರಹಿಸಿದರು.
ಇನ್ನೂ, “ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಬಳ್ಳಾರಿಯನ್ನು ಭಸ್ಮ ಮಾಡುವ ಮಾತುಗಳು ಕೇಳಿಬಂದಿವೆ. ಇವೆಲ್ಲವೂ ಪೂರ್ವನಿಯೋಜಿತ ಗಲಾಟೆಯ ಅನುಮಾನ ಮೂಡಿಸುತ್ತಿವೆ” ಎಂದು ಆರೋಪಿಸಿದರು.
ಘಟನೆಯ ತನಿಖೆಗೆ ನ್ಯಾಯಾಂಗ ತನಿಖೆ ಅಗತ್ಯವಿದ್ದು, ತಪ್ಪಿತಸ್ಥರು ಯಾವ ಪಕ್ಷದವರೇ ಆಗಿರಲಿ ಕಠಿಣ ಶಿಕ್ಷೆಗೆ ಒಳಪಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.



