ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿರುವ ಚಟ ಎಂದರೆ, ಅದು ಸೆಲ್ ಫೋನ್ ಬಳಕೆ. ಇದನ್ನು ಬಳಸುತ್ತಾ ಕುಳಿತುಕೊಂಡರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಈ ಸೆಲ್ ಫೋನ್ಗಳ ಅತಿಯಾದ ಬಳಕೆ ಚಟವಾಗಿದ್ದು, ಇದು ಅನೇಕ ಆರೋಗ್ಯ ಸಮಸ್ಯೆ ಮತ್ತು ರೋಗಕ್ಕೆ ಕೂಡ ಕಾರಣವಾಗುತ್ತಿದೆ. ಈ ಬಗ್ಗೆ ವೈದ್ಯರು ಕೂಡ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಇದರ ಬಳಕೆಯಿಂದ ದೂರಾಗುವುದು ಅಗತ್ಯವಾಗಿದೆ.
ಮೊಬೈಲ್ ಒಂದು ರೀತಿಯಲ್ಲಿ, ನಮ್ಮ ಜೀವನವನ್ನು ಸುಲಭ, ವೇಗ ಮತ್ತು ಅನುಕೂಲಕರವಾಗಿಸಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು, ಪ್ರಪಂಚದ ಮಾಹಿತಿ ಪಡೆಯಲು ಅಥವಾ ಯಾವುದೇ ಕೆಲಸವನ್ನು ತಕ್ಷಣ ಪೂರ್ಣಗೊಳಿಸಲು, ದೈನಂದಿನ ಅಗತ್ಯಗಳನ್ನು ಪೂರೈಸಲು ಅತ್ಯಂತ ಸಹಕಾರಿಯಾಗಿದೆ. ಇದರ ಮೂಲಕ ಇಂಟರ್ನೆಟ್ ಜೊತೆಗೆ ಅನೇಕ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಮಗೆ ಅಗತ್ಯವಿರುವ ಮಾಹಿತಿಯನ್ನು ನಾವು ಎಲ್ಲಿಯಾದರೂ, ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ವಸ್ತುವಾಗಿರಲಿ ಅವುಗಳಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ. ಫೋನ್ ಬಳಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದನ್ನು ಹೆಚ್ಚು ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಂದಿನ ಕಾಲದಲ್ಲಿ, ನಾವು ಫೋನ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಅದರ ವ್ಯಸನಿಗಳಾಗಿದ್ದೇವೆ. ಈ ರೀತಿಯ ಅಭ್ಯಾಸ ನಮಗೆ ಅನೇಕ ರೀತಿಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಫೋನ್ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಫೋನ್ ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣ ಮತ್ತು ಫೋನ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ವಿಶೇಷವಾಗಿ ನಾವು ಫೋನ್ ಅನ್ನು ತಲೆಯ ಬಳಿ ಇಟ್ಟಾಗ, ಅಂದರೆ, ಫೋನ್ ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆಯಿದ್ದರೆ, ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯಕ್ಕೆ ಸಂಬಂಧಿತ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಅತಿಯಾದ ಫೋನ್ ಬಳಕೆಯು ದೈಹಿಕ ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೆಚ್ಚು ಫೋನ್ ಬಳಕೆಯಿಂದ ಯಾವ ರೋಗಗಳು ಉಂಟಾಗಬಹುದು ತಿಳಿದುಕೊಳ್ಳಿ.
ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ವರೆಗೆ ಫೋನ್ ನಲ್ಲಿ ಕೆಲಸ ಮಾಡುವುದರಿಂದ ಕಣ್ಣು ಮಸುಕಾಗುವುದು, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಮಲಗುವ ಮೊದಲು ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ, ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ಇದಲ್ಲದೆ, ಫೋನ್ ಗಳನ್ನು ನಿರಂತರವಾಗಿ ಕೈಯಲ್ಲಿ ಹಿಡಿದುಕೊಳ್ಳುವುದು ಅಥವಾ ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುವುದರಿಂದ ದೇಹವು ಕೆಟ್ಟ ಭಂಗಿಯಿಂದ ಬಳಲು ಕಾರಣವಾಗುತ್ತದೆ. ಫೋನ್ ಬಳಸುವಾಗ ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ತಲೆನೋವು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಇದರಿಂದ ರಕ್ಷಣೆ ಪಡೆಯುವುದು ಹೇಗೆ?
ನಿಮ್ಮ ಮೊಬೈಲ್ ಫೋನ್ ಗಳನ್ನು ಆದಷ್ಟು ಹಾಸಿಗೆಯಿಂದ ದೂರವಿಡಿ.
ನಿಮ್ಮ ಫೋನ್ ಅನ್ನು ಪರಿಶೀಲಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ.
ಕೆಲಸ ಅಥವಾ ಅಧ್ಯಯನದ ಸಮಯದಲ್ಲಿ ಫೋನ್ ಅನ್ನು ದೂರವಿಡಿ.