ಗದಗ: ಕ್ಷುಲ್ಲಕ ವಿಚಾರಕ್ಕೆ ಶುರುವಾದ ಕುಟುಂಬ ಜಗಳವು ಯುವಕನೋರ್ವನ ಸಾವಿನಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್.ಎಸ್. ಪಾಟೀಲ್ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಎಸ್.ಎಸ್. ಪಾಟೀಲ್ ನಗರ ನಿವಾಸಿ ವಸಂತ ಪರಸಪ್ಪ ಭಜಂತ್ರಿ (26) ಮೃತ ದುರ್ದೈವಿ. ಪೊಲೀಸರ ಪ್ರಾಥಮಿಕ ತನಿಖೆಗಳ ಪ್ರಕಾರ, ಮೃತ ಯುವಕ ದುಡಿಯದೇ ನಿತ್ಯವೂ ಕುಡಿತದ ಚಟಕ್ಕೆ ದಾಸನಾಗಿದ್ದ. ಅಷ್ಟೇ ಅಲ್ಲದೇ ಕುಡಿದ ಮತ್ತಲ್ಲಿ ಮನೆಯವರಿಗೆ ಅವಾಚ್ಯವಾಗಿ ಬೈಯುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರವಾಗಿ ಶುರುವಾದ ಗಲಾಟೆಯಲ್ಲಿ ಕುಟುಂಬಸ್ಥರು ಅದ ಅಕ್ಕ ಮಂಜವ್ವ ರಮೇಶ ಬಜಂತ್ರಿ (34) ಹಾಗೂ ಅಳಿಯ ಶ್ರೀಕಾಂತ ರಮೇಶ ಬಜಂತ್ರಿ (20) ಆತನಿಗೆ ಹೊಡೆದ ಪರಿಣಾಮ, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದು ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.



