ಗದಗ: ಆಸ್ತಿ ವಿವಾದ ಹಿನ್ನೆಲೆ ಅಣ್ಣನೇ ತಂಗಿಯನ್ನು ಚಾಕುವಿನಿಂದ ಇರಿದು, ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ನಡೆದಿದೆ. ಕಾಳಮ್ಮ ಬೆಟಗೇರಿ (35) ಅಲಿಯಾಸ್ ಖುರ್ಷಿದಾ ಹತ್ಯೆಯಾದ ಮಹಿಳೆಯಾಗಿದ್ದು,
ಕಾಳಮ್ಮನ ಅಣ್ಣ ಈಶ್ವರಪ್ಪ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಆಸ್ತಿ ವ್ಯಾಜ್ಯ ವಾಪಾಸ್ ಪಡೆಯುವಂತೆ ಕೇಳಲು ಮನೆಗೆ ಹೋಗಿದ್ದ ಈಶ್ವರಪ್ಪ, ಮಾತು ಕೇಳದಿದ್ದಕ್ಕೆ ಚಾಕುವಿನಿಂದ ನಾಲ್ಕೈದು ಬಾರಿ ಚುಚ್ಚಿದ್ದಾನೆ. ನಂತರ ಕುತ್ತಿಗೆಯ ಮೇಲೆ ಕಾಲಿಟ್ಟು ತಂಗಿಯ ಉಸಿರು ನಿಲ್ಲಿಸಿದ್ದಾನೆ. ನಂತರ ನೇರವಾಗಿ ತಾನೇ ತಂದ ಕಾರಲ್ಲಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮೃತ ಮಹಿಳೆ 14 ವರ್ಷದ ಹಿಂದೆ ಕಟಿಂಗ್ ಸಲೂನ್ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ 2020 ರಲ್ಲಿ ಮೆಹಬೂಬ್ ಸಾಬ ಬೆಟಗೇರಿ ಎಂಬಾತನ ಜೊತೆ ಎರಡನೇ ಮದುವೆಯಾಗಿದ್ದಳು.
ಜೀವನ ನಿರ್ವಹಣೆಗಾಗಿ ಅಣ್ಣನ 15 ಎಕರೆ ಜಮೀನಿನಲ್ಲಿ ಪಾಲು ಕೇಳಿದ್ದ ಖುರ್ಷಿದಾ, ಕೋರ್ಟ್ ಮೆಟ್ಟಿಲೇರಿದ್ದಳು.
ಈ ಹಿನ್ನಲೆ ಇಂದು ಮನೆಗೆ ಬಂದು ಕೇಸ್ ವಾಪಸ್ ಪಡೆಯವಂತೆ ಅಣ್ಣ ಒತ್ತಾಯ ಮಾಡಿದ್ದಾನೆ. ಆದರೆ, ಅಣ್ಣನ ಮಾತು ಕೇಳದೆ ವಾಗ್ವಾದಕ್ಕಿಳಿದಿದ್ದ ತಂಗಿಗೆ ಚಾಕುವಿನಿಂದ ಆರು ಬಾರಿ ಇರಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಸಧ್ಯ ಸ್ಥಳಕ್ಕೆ ಗದಗ ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ ಹಾಗೂ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಗದಗನ ಪ್ರಭಾರ ಎಸ್ಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.