ನೆಲಮಂಗಲ:-ನೆಲಮಂಗಲ ಪೊಲೀಸ್ ಉಪವಿಭಾಗದ ಬೆಂಗಳೂರು ಉತ್ತರ ತಾಲೂಕಿನ ಕೆ.ಜಿ.ಲಕ್ಕೇನಹಳ್ಳಿ ಗ್ರಾಮದಲ್ಲಿ ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ ಮಾಡಿದ ತಾಯಿಯೋರ್ವಳು ಐದು ವರ್ಷದ ತನ್ನ ಮಗುವನ್ನ ಕತ್ತು ಹಿಸುಕಿ ಕೊಂದಿರುವ ಘಟನೆ ಜರುಗಿದೆ.
ಸಿರಿ ಕೊಲೆಯಾದ ಮಗು. ಜಯರಾಂ ಹಾಗೂ ಮಹಾಲಕ್ಷ್ಮಿ 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷದಿಂದ ಕೆಲಸವಿಲ್ಲದೆ ಕುಡಿತಕ್ಕೆ ದಾಸನಾಗಿದ್ದ ಜಯರಾಂ, ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದ. ಮನೆಯಲ್ಲಿ ಆಗಾಗ ಗಂಡ-ಹೆಂಡತಿ ನಡುವೆ ಜಗಳ ನಡೆದು ಬುಧವಾರ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಬಳಿಕ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಮಹಾಲಕ್ಷ್ಮಿ ಮಗುವಿನ ಕತ್ತು ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೂಡಲೇ ಮನೆಯವರು ಡೋರ್ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ತಾಯಿ ಮಹಾಲಕ್ಷ್ಮಿಯನ್ನ ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ಡಾ.ವೆಂಕಟೇಶ್ ಪ್ರಸನ್ನ, ಸಿಪಿಐ ಮುರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ