ಬೆಳಗಾವಿ:- ಕಂದಕಕ್ಕೆ ಸೇನೆಯ ಟ್ರಕ್ ಉರುಳಿದ ಪರಿಣಾಮ ಕರ್ನಾಟಕದ ಯೋಧ ಸೇರಿ ಐವರು ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಜರುಗಿದೆ.
ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಸೇನಾಧಿಕಾರಿಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ದುರಂತದಲ್ಲಿ ಕರ್ನಾಟಕ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ್ ಎಂಬವರು ಹುತಾತ್ಮರಾಗಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಧರ್ಮರಾಜ್ ಸುಭಾಷ್ ಮನೆಯಲ್ಲಿ ನೀರವಮೌನ ಆವರಿಸಿದೆ.
ಈ ಅಪಘಾತಕ್ಕೆ ಕಾರಣ ಏನು ಎಂಬುದು ಇದುವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.