ಹುಬ್ಬಳ್ಳಿ: ಗಾಂಜಾ ಮಾರಾಟ ಮತ್ತು ಸೇವನೆ ಮಾಡಿದ 17 ಜನರನ್ನು ಬಂಧನ ಮಾಡಲಾಗಿದೆ. ಈ ಬಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಉಪ ಆಯುಕ್ತ ಮಹಾನಿಂಗ ನಂದಗಾವಿ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿತ್ತು. ಮಿರ್ಜಾನ ಅಷ್ಪಕ್ ಮುಲ್ಲಾ, ಶಿವಕುಮಾರ, ಇಕ್ಬಾಲ್ ಅಹ್ಮದ, ಆರೀಫ್, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದ ರೆಹಾನ, ಸಾಧಿಕ ಕಿತಾಬ್ವಾಲೆ, ಮೆಹಬೂಬಸಾಬ ಡೌಗಿ ಬಂಧಿತರು.
ಘಟನೆ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಡಿಸಿಪಿ ಮಹಾನಿಂಗ ನಂದಗಾವಿ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಹಾಗೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಜನರನ್ನು ಬಂಧಿಸಲಾಗಿದೆ ಎಂದರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಆನಂದನಗರದ ಕುಷ್ಠರೋಗ ಆಸ್ಪತ್ರೆ ಬಳಿ 9 ಜನ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ.
ಬಂಧಿತರಿಂದ 1,25,000 ರೂ. ಮೌಲ್ಯದ 1500 ಗ್ರಾಂ, ಗಾಂಜಾ, 60 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್, 2 ಸಾವಿರ ರೂ. ನಗದು ಸೇರಿ ಒಟ್ಟು 1,87,000 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.