ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ, ಸಚಿವರ ಆಗಮನ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಡಿ.15ರಂದು ರೋಣ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ಡಜನ್‌ಗೂ ಹೆಚ್ಚು ಸಚಿವರು ಆಗಮಿಸುವ ನಿರೀಕ್ಷೆಯಿದೆ. ಗಿರಡ್ಡಿ ಸರಕಾರಿ ಕಾಲೇಜಿನ ಆವರಣದ ಬದಲಾಗಿ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸುವದಾಗಿ ಬಹುತೇಕ ಖಚಿತವಾಗಿದೆ.

Advertisement

ಶಾಸಕ ಜಿ.ಎಸ್. ಪಾಟೀಲ ಗುರುವಾರ ಬೆಳಗಿನ ಜಾವ ರೋಣ ಹಾಗೂ ಗಜೇಂದ್ರಗಡ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಕ್ರೀಡಾಂಗಣಕ್ಕೆ ತೆರಳಿ ಸಮಾಲೋಚನೆ ನಡೆಸಿ, ಕ್ರೀಡಾಂಗಣದಲ್ಲಿಯೇ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಸಮಾರಂಭವನ್ನು ನೆರವೇರಿಸಲು ಸೂಚಿಸಿದರು.

ಈ ಮೊದಲು ಗುರುತಿಸಿದ್ದ ಜಾಗೆಯೂ ಬದಾಮಿ ರಸ್ತೆಗೆ ಹೊಂದಿಕೊಂಡಿದ್ದು, ಅಲ್ಲಿ ಸಮಾವೇಶ ನಡೆದರೆ ಸುಗಮ ಸಂಚಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮತ್ತೆ ಗುರುವಾರ ಸ್ಥಳ ಪರಿಶೀಲನೆ ಕಾರ್ಯ ನಡೆಯಿತು. ಅಲ್ಲದೆ ಡಿ.15 ರವಿವಾರವಿರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಹೀಗಾಗಿ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಶಾಲಾ-ಕಾಲೇಜುಗಳ ಆವರಣದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟರೆ ಸಮಸ್ಯೆ ಉದ್ಭವಿಸುವುದಿಲ್ಲ ಎಂಬ ಆಲೋಚನೆಯಿಂದ ಕಾರ್ಯಕ್ರಮವನ್ನು ತಾಲೂಕಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎನ್ನುವ ಅಭಿಪ್ರಾಯ ಕೆಲ ಮುಖಂಡರುಗಳಿಂದ ವ್ಯಕ್ತವಾಯಿತು.

ಇನ್ನು ಕಾರ್ಯಕ್ರಮದ ಯಶಸ್ವಿಗೆ ಸಮಿತಿಗಳ ರಚನೆ ಕಾರ್ಯ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕು ಎಂಬ ಸೂಚನೆಯನ್ನು ಸಹ ನೀಡಲಿದ್ದಾರೆ. ಮುಖ್ಯವಾಗಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು, ಶಂಕುಸ್ಥಾಪನೆಗೆ ಆಗಮಿಸುವ ನಾಗರಿಕ ಸಮುದಾಯಕ್ಕೆ ತೊಂದರೆಯಾಗದಂತೆ ನೀಗಾ ವಹಿಸಬೇಕು ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಒಟ್ಟಿನಲ್ಲಿ, ಬೃಹತ್ ಸಮಾವೇಶದ ಯಶಸ್ವಿಗೆ ಶಾಸಕ ಜಿ.ಎಸ್. ಪಾಟೀಲ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಸಂಗು ನವಲಗುಂದ, ಆನಂದ ಚಂಗಳಿ, ಡಾ. ಸಂಜಯ ರೆಡ್ಡೆರ, ಯಲ್ಲಪ್ಪ ಕಿರೇಸೂರ, ಅಸ್ಲಂ ಕೊಪ್ಪಳ, ಮಲಿಕ ಯಲಿಗಾರ, ತಹಸೀಲ್ದಾರ್ ನಾಗರಾಜ್ ಕೆ, ಎಇಇ ಬಲವಂತಪ್ಪ ನಾಯಕ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.

 

ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಎಚ್.ಸಿ. ಮಹದೇವಪ್ಪ, ಎಚ್.ಕೆ. ಪಾಟೀಲ, ಸತಿಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಕೃಷ್ಣ ಬೈರೆಗೌಡ, ಸಂತೋಷ ಲಾಡ್, ಶಿವರಾಜ್ ತಂಗಡಗಿ, ಶರಣಗೌಡ ಪಾಟೀಲ, ಆರ್.ಬಿ. ತಿಮ್ಮಾಪೂರ, ಮಲ್ಲಿಕಾರ್ಜುನ ಸೇರಿದಂತೆ ಅನೇಕ ಮುಖಂಡರು ಆಗಮಿಸುವ ನಿರೀಕ್ಷೆಯಿದ್ದು, ಒಟ್ಟಿನಲ್ಲಿ ಡಜನ್‌ಗೂ ಹೆಚ್ಚು ಸಚಿವರು ಆಗಮಿಸುವುದು ಖಚಿತ ಎಂಬ ಮಾತುಗಳು ಸಂಘಟಕರಿಂದ ತಿಳಿದುಬಂದಿದೆ.


Spread the love

LEAVE A REPLY

Please enter your comment!
Please enter your name here