ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಅಸಭ್ಯ ವರ್ತನೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯದ ಬೆರಳು ತೋರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ದಿಢೀರ್ ಬೆಂಗಳೂರಿಗೆ ಬಂದಿಳಿದ ಆರ್ಯನ್ ಖಾನ್, ನಗರದ ಪ್ರಮುಖ ನೈಟ್ ಸ್ಪಾಟ್‌ಗೆ ವಿಶೇಷ ಅತಿಥಿಯಾಗಿ ಹೋದರು. ರಾತ್ರಿ 11 ಗಂಟೆಗೆ ಪಬ್ ಪ್ರವೇಶಿಸಿದ ಅವರು ಸುಮಾರು 12:45ರವರೆಗೆ ಅಲ್ಲೇ ಗಡಿಬಿಡಿ ವಾತಾವರಣವನ್ನು ಆನಂದಿಸಿದ್ದರು. ಈ ವೇಳೆ ಪಬ್‌ನ ಬಾಲ್ಕನಿಯಲ್ಲಿ ನಿಂತು ಜನರತ್ತ ಮಧ್ಯದ ಬೆರಳು ತೋರಿಸುವ ಅಸಭ್ಯ ವರ್ತನೆ ತೋರಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಯಿತು.
ಘಟನೆಯ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಚುರುಕುಗೊಳಿಸಿ ಈಗಾಗಲೇ ಪಬ್ ಮ್ಯಾನೇಜರ್‌ರನ್ನು ಒಂದು ಗಂಟೆ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ದುರ್ವರ್ತನೆಗೆ ಕಾರಣವೇನು? ಯಾರತ್ತ ಸನ್ನೆ ತೋರಿದರು? ಜನರ ಕೂಗಾಟಕ್ಕೆ ಪ್ರತಿಕ್ರಿಯೆಯಾ? ಎಂಬ ಹಲವು ಪ್ರಶ್ನೆಗಳ ಉತ್ತರ ಹುಡುಕುತ್ತಿದ್ದಾರೆ. ಅಧಿಕೃತ ದೂರು ದಾಖಲಾಗದಿದ್ದರೂ, ಅಸಭ್ಯ ವರ್ತನೆ ದೃಢಪಟ್ಟರೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಈ ವೇಳೆ ಆರ್ಯನ್ ಖಾನ್‌ಗೆ ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಮತ್ತು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸಹ ಸಾಥ್ ನೀಡಿದ್ದರು. ದುರ್ವರ್ತನೆಯ ಕ್ಷಣದಲ್ಲಿ ಇಬ್ಬರೂ ಅಲ್ಲೇ ನಕ್ಕುಕೊಂಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಈ ಕುರಿತಾಗಿ ಝೈದ್ ಖಾನ್ ಸ್ಪಷ್ಟನೆ ನೀಡುತ್ತಾ, “ಆರ್ಯನ್ ಜನರನ್ನ ನೋಡಿ ಕೈ ತೋರಿಸಲಿಲ್ಲ. ಅವರ ಸ್ನೇಹಿತನೊಬ್ಬರತ್ತ ಫ್ರೆಂಡ್‌ಶಿಪ್‌ನಲ್ಲಿ ಸನ್ನೆ ಮಾಡಿದರು. ಆದರೂ ಜನರ ನಡುವೆ ಮಧ್ಯದ ಬೆರಳು ತೋರಿಸಿದ್ದು ತಪ್ಪೇ. ಆದರೆ ಜನರತ್ತ ತೋರಿಸಿದ್ದರೆ ದೊಡ್ಡ ತಪ್ಪಾಗುತ್ತಿತ್ತು” ಎಂದು ಹೇಳಿದ್ದಾರೆ.
ಆರ್ಯನ್ ಖಾನ್ ಅವರ ಅಸಭ್ಯ ವರ್ತನೆ ಈಗ ಬೆಂಗಳೂರು ನಗರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.


