ಮಗುವಿನ ಉತ್ತಮ ಭವಿಷ್ಯ ರೂಪಿಸಿ : ಆಶಿಶ್ ತೋಸ್ನಿವಾಲ

0
Ashish Tosniwala handed over an adopted child to a childless couple
Spread the love

ವಿಯಸಾಕ್ಷಿ ಸುದ್ದಿ, ಗದಗ : ಮಕ್ಕಳಿಲ್ಲದ ದಂಪತಿಗಳ ಕೊರಗು ಬಹು ನೋವಿನ ಸಂಗತಿಯಾಗಿದ್ದು, ಇಂತಹ ದಂಪತಿಗಳ ಮಡಿಲಿಗೆ ದತ್ತು ಮಗುವನ್ನು ಹಸ್ತಾಂತರಿಸುವದು ಅವಿಸ್ಮರಣೀಯವಾದ ಸಂಗತಿಯಾಗಿದೆ ಎಂದು ಸಿವ್ಹಿಲ್ ಕಾಂಟ್ರ್ಯಾಕ್ಟರ್ ಆಶಿಶ್ ತೋಸ್ನಿವಾಲ ಹೇಳಿದರು.
ಅವರು ಗುರುವಾರ ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಗಂಡು ಮಗುವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಹಸ್ತಾಂತರಿಸಿ ಮಾತನಾಡಿದರು.
ಮನ ಮಿಡಿಯುವ, ಮನ ಕಲಕುವ ಸನ್ನಿವೇಶ ಇದಾಗಿದ್ದು, ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಮಗುವನ್ನು ನೀಡುವದು ಪುಣ್ಯದ ಕೆಲಸವಾಗಿದೆ. ಪಾಲಕ-ಪೋಷಕರಿಲ್ಲದ ಮಗುವಿಗೆ ಭವಿಷ್ಯ ರೂಪಿಸುವ ಹಾಗೂ ಮಕ್ಕಳಿಲ್ಲದ ಕೊರಗಿನಲ್ಲಿದ್ದ ದಂಪತಿ ಸಂತೃಪ್ತ ಭಾವನೆ ಹೊಂದುವದು ವರ್ಣಾತೀತವಾದದ್ದು. ಇದರಿಂದ ದಂಪತಿಗಳಿಗೆ ಹಾಗೂ ಮಗುವಿಗೆ ಸಂತೃಪ್ತ ಭಾವನೆ ಮೂಡಲು ಸಾಧ್ಯ. ದತ್ತು ಪಡೆದವರು ಮಗುವಿಗೆ ಉನ್ನತ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡಿ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮೇಘಾ ತೋಸ್ನಿವಾಲ ಮಾತನಾಡಿ, ಪರಿತ್ಯಕ್ತ ಮಕ್ಕಳಿಗೆ ಪೋಷಕರನ್ನು ಹಾಗೂ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಮಗುವನ್ನು ನೀಡಲು ಸಂಪರ್ಕ ಕೊಂಡಿಯಾಗಿ ಕಾರ್ಯ ಮಾಡುವ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಅತಿಥಿಯಾಗಿ ಆಗಮಿಸಿದ್ದ ಗಣ್ಯ ವ್ಯಾಪಾರಸ್ಥರಾದ ನವೀನ ಅಕ್ಕಿ ಮಾತನಾಡಿ, ಗದಗ ಪರಿಸರದಲ್ಲಿ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಉತ್ತಮ ಮಾನವೀಯ, ಸಾಮಾಜಿಕ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದರು.
ಆಶಿಶ್ ಹಾಗೂ ಮೇಘಾ ದಂಪತಿಗಳು ರಾಣೆಬೆನ್ನೂರಿನ ರುದ್ರಪ್ಪ ಹಾಗೂ ಲತಾ ದಂಪತಿಗಳಿಗೆ ಮಗುವನ್ನು ಹಸ್ತಾಂತರಿಸಿ ಮಗುವಿನ ಭವಿಷ್ಯಕ್ಕೆ ಶುಭ ಕೋರಿದರು.
ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ರಾಜಪುರೋಹಿತ ನಿರೂಪಿಸಿದರು, ನಾಗವೇಣಿ ಕಟ್ಟಿಮನಿ ಪ್ರಾರ್ಥಿಸಿ ವಂದಿಸಿದರು. ಸಮಾರಂಭದಲ್ಲಿ ಲಲಿತಾಬಾಯಿ ಮೇಹರವಾಡೆ, ರಾಜೇಶ ಖಟವಟೆ, ಗುರುಸಿದ್ಧಪ್ಪ ಕೊಣ್ಣೂರ, ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಮುಂತಾದವರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಸಮಾಜದಲ್ಲಿ ಪರಿತ್ಯಕ್ತ ಮಕ್ಕಳ ಸಂಖ್ಯೆ ಶೂನ್ಯವಾಗಬೇಕು. ಆ ರೀತಿಯ ವಾತಾವರಣ ನಿರ್ಮಾಣಗೊಳ್ಳಲಿ. ಸಂಸ್ಕಾರ ಮತ್ತು ಸಂಸ್ಕೃತಿಯ ತಳಹದಿಯ ಮೇಲೆ ಮೌಲ್ಯಯುತ ಜೀವನ ಎಲ್ಲರೂ ನಡೆಸುವಂತಾಗಲಿ ಎಂದರು. 

Spread the love
Advertisement

LEAVE A REPLY

Please enter your comment!
Please enter your name here