ರಸ್ತೆ ಅಪಘಾತದಲ್ಲಿ ನಟ ಆಶಿಷ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ, ನಟನೇ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಗುಹವಾಟಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಇನ್ಸ್ಟಾಗ್ರಾಮ್ ಲೈವ್ ಮೂಲಕ ಮಾತನಾಡಿದ ಅವರು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ಸಣ್ಣ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೂಪಾಲಿಗೆ ಕೆಲ ಸಮಯ ಪ್ರಜ್ಞೆ ತಪ್ಪಿದ್ದರೂ, ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಆಶಿಷ್ ವಿದ್ಯಾರ್ಥಿ ಮಾಹಿತಿ ನೀಡಿದ್ದಾರೆ.
“ಅಪಘಾತ ನಡೆದಿದ್ದು ನಿಜ. ಆದರೆ ಅದನ್ನು ಭಯಾನಕವಾಗಿ ಚಿತ್ರಿಸುವ ಅಗತ್ಯ ಇಲ್ಲ. ನಾವು ಆಸ್ಪತ್ರೆಯಲ್ಲಿ ಚೆನ್ನಾಗಿದ್ದೇವೆ. ರೂಪಾಲಿ ಸುರಕ್ಷಿತವಾಗಿದ್ದಾರೆ. ನನಗೂ ಯಾವುದೇ ಗಂಭೀರ ಗಾಯಗಳಿಲ್ಲ” ಎಂದು ಆಶಿಷ್ ವಿದ್ಯಾರ್ಥಿ ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ಸ್ಥಿತಿಯ ಬಗ್ಗೆಯೂ ಮಾತನಾಡಿದ ಅವರು, “ಆತನಿಗೂ ಈಗ ಪ್ರಜ್ಞೆ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಕೋರಿದ್ದಾರೆ.
ಬಹುಭಾಷಾ ನಟನಾಗಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿರುವ ಆಶಿಷ್ ವಿದ್ಯಾರ್ಥಿ, ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ತಮ್ಮ ಪ್ರವಾಸ ಮತ್ತು ಆಹಾರ ಅನುಭವಗಳನ್ನು ಹಂಚಿಕೊಳ್ಳುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.



