ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಪ್ರತಿ ವರ್ಷ ಸರ್ವ ಧರ್ಮದ ಜನರು ಸೇರಿ ಭಾವೈಕ್ಯತೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಅದರಲ್ಲೂ ಮುಸ್ಲಿಂ ಯುವಕರು, ಹಿರಿಯರು ಮುಂದಾಳತ್ವ ವಹಿಸಿ ಐದು ದಿನವೂ ಪೂಜೆ, ಪ್ರಸಾದ, ನಿರ್ವಹಣೆಯ ಕೆಲಸಗಳನ್ನು ಮಾಡುವ ಮೂಲಕ ಬೆಳಗಿನಿಂದ ರಾತ್ರಿಯವರೆಗೆ ಗಣಪತಿ ಸೇವೆಗೆ ಮುಂದಾಗುತ್ತಾರೆ.
ಗಣಪತಿ ಕಮಿಟಿಯಿಂದ ಓಣಿಯ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಿಸುತ್ತಾರೆ. ಮೂರ್ತಿಯ ವಿಸರ್ಜನೆ ಬಳಿಕ ಲೆಕ್ಕಪತ್ರ ಒಪ್ಪಿಸಿ ಅದರಲ್ಲಿ ಉಳಿಯುವ ಹಣದಲ್ಲಿ ಒಂದಿಷ್ಟು ಹಣವನ್ನು ಓಣಿಯಲ್ಲಿ ನಡೆಯುವ ತುರ್ತು ಘಟನೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಇನ್ನುಳಿದ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದ ಇಬ್ಬರು ಅಥವಾ ಮೂವರು ಯುವಕರಿಗೆ ನೀಡುತ್ತಾರೆ. ಅವರು ಮರು ವರ್ಷ ಗಣೇಶ ಉತ್ಸವದ ಒಂದು ತಿಂಗಳ ಮೊದಲು ಸ್ವಲ್ಪ ಹೆಚ್ಚಿನ ಹಣ ಸೇರಿಸಿ ಮರಳಿ ಕಮಿಟಿಗೆ ನೀಡುತ್ತಾರೆ. ಇದರಿಂದ ಎಷ್ಟೋ ಯುವಕರ ಕಿರು ವ್ಯಾಪರಕ್ಕೆ, ಕಷ್ಟಕ್ಕೆ ಸಹಾಯವಾಗಿದೆ ಎನ್ನುತ್ತಾರೆ ನಾರಾಯಣಪ್ಪ ಯಂಕಪ್ಪ ಮಾಳೋತ್ತರ.
ಸರ್ಕಾರದಿಂದ 1990ರಲ್ಲಿ ಉಚಿತವಾಗಿ ನೀಡಿದ ಇಲ್ಲಿನ ಮನೆಗಳಲ್ಲಿ ವಾಸ ಮಾಡುವ ಎಲ್ಲರೂ ಬಡವರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ. ಹಾಗಾಗಿ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಉಪಯುಕ್ತವಾಗುವ ವಸ್ತುಗಳನ್ನು ಪ್ರತಿ ವರ್ಷ ಗಣಪತಿ ಕಮಿಟಿಯಿಂದ ಖರೀದಿಸುತ್ತಾ ಬಂದಿದ್ದಾರೆ. ಈ ಮೊದಲಿನ ವರ್ಷಗಳಲ್ಲಿ ಗೋಡೆಗೆ ಹಾಕುವ ಸ್ಕ್ರೀನ್, ಸ್ಟೇಜ್ ಸ್ಕ್ರೀನ್ ಖರೀದಿ ಮಾಡಲಾಗಿತ್ತು. ಅದನ್ನು ಓಣಿಯ ಯಾರದೇ ಮನೆಯಲ್ಲಿ ಕಾರ್ಯಕ್ರಮ ನಡೆದರೂ ಬಳಕೆ ಮಾಡಿಕೊಳ್ಳುತ್ತಿದ್ದರೆ. ಕಳೆದ ವರ್ಷ ಉಳಿದ ಹಣದಲ್ಲಿ ಲೈಟ್, ವೈರ್‌ಲೆಸ್ ಮೈಕ್, ಸೌಂಡ್ ಸಿಸ್ಟಂ ಖರೀದಿ ಮಾಡಿದ್ದಾರೆ. ಇವು ಜನರಿಗೆ ಉಪಯೋಗವಾಗಲಿವೆ ಎನ್ನುತ್ತಾರೆ ರೈಮಾನ್ ನದಾಫ್.
ಗಣಪತಿ ಉತ್ಸವದ 15 ದಿನಗಳ ಮೊದಲು ಮಕ್ಕಳು ಕೋಲಾಟ, ನಾಟಕ, ಹಾಡು, ನೃತ್ಯ ಕಲಿಕೆಗೆ ಮುಂದಾಗುತ್ತಾರೆ. ಮೂರ್ತಿ ಪ್ರತಿಷ್ಠಾಪನೆಯ 4ನೇ ದಿನ ಸ್ಟೇಜ್ ಹಾಕಿ ಅಲ್ಲಿ ಮಕ್ಕಳಿಂದ ಕಲಾ ಪ್ರದರ್ಶನ ನಡೆಯುತ್ತದೆ. ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಹಿಂದೂ-ಮುಸ್ಲಿಂ ಸಮುದಾಯದ ಮಕ್ಕಳು ಪ್ರದರ್ಶನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮಹಿಳೆಯರು, ಮಕ್ಕಳಿಗಾಗಿ ಪ್ರತಿ ವರ್ಷ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಗಣಪತಿ ಉತ್ಸವದ ನಾಲ್ಕನೇ ದಿನ ಸಾರ್ವಜನಿಕರಿಗೆ ವಿಶೇಷ ಅನ್ನಸಂತರ್ಪಣೆ ಮಾಡುತ್ತಾರೆ. ನಾವು ಅಲ್ಲಾಹನೊಂದಿಗೆ ಗಣೇಶನನ್ನು ಆರಾಧನೆ ಮಾಡುತ್ತೇವೆ. ಇದರಿಂದ ನಮ್ಮ ಮನಸ್ಸಿಗೆ ಸಂತಸ ಸಿಕ್ಕಿದೆ. ಸಹೋದರತ್ವ ಭಾವನೆಯಿಂದ ಎಲ್ಲರೂ ಅನೋನ್ಯವಾಗಿದ್ದೇವೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹಸನಸಾಬ್ ಕೊಪ್ಪಳ, ದಾದುಸಾಬ್ ನದಾಫ್, ರಾಜಾ ಮುದಗಲ್, ಶರಣಪ್ಪ ಕೊಂಡಿ, ಹನಮಂತಪ್ಪ ಜೋಡಗಂಬಳಿ, ಪರಸಪ್ಪ ರಾಠೋಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿವರ್ಷ ಇಲ್ಲಿ ನಡೆಯುವ ಗಣಪತಿ ಉತ್ಸವದ ಕೊನೆಯ ದಿನ ಅಂದರೆ 5ನೇ ದಿನದ ಸಂಜೆ ಪೂಜೆಯ ಬಳಿಕ ನಡೆಯುವ ಪೂಜಾ ಸಾಮಗ್ರಿಗಳ ಖರೀದಿಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಚಿಕ್ಕ ವಸ್ತುವಿನಿಂದ ದೊಡ್ಡ ವಸ್ತುವಿನವರೆಗೂ ಸವಾಲಿನ ಭರಾಟೆ ನಡೆಯುತ್ತದೆ. ಮಕ್ಕಳ ಪಾಟಿ, ಪಾಟಿ ಚೀಲ (ಬ್ಯಾಗ್) ಎರಡ್ಮೂರು ಸಾವಿರದವರೆಗೆ ಹೋಗುತ್ತದೆ. ಅದರಲ್ಲೂ ಬೆಳ್ಳಿ ಸಾಮಗ್ರಿ, ಗಣಪತಿ ಮೂರ್ತಿಯ ಮೇಲಿನ ಆಭರಣಗಳಿಗೆ ಹಾಗೂ ಅಂತರಗಾಯಿಗಳಿಗೆ ಬಹು ಬೇಡಿಕೆ ಇರುತ್ತದೆ. ಗಣಪತಿ ಸವಾಲಿನಲ್ಲಿ ಭಾಗವಹಿಸಿ ಪಡೆದರೆ ಮುಂದಿನ ವರ್ಷದವರೆಗೂ ಧನಪ್ರಾಪ್ತಿ ಹಾಗೂ ಅಭಿವೃದ್ಧಿ ಹೊಂದುತ್ತೇವೆ ಎನ್ನುವ ನಂಬಿಕೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎನ್ನುತ್ತಾರೆ ನಾಗರಾಜ ಇಟಗಿ.