ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೇವರ ಮೂರ್ತಿಗಳನ್ನು ಸಿದ್ಧಪಡಿಸುವದು ಒಂದು ಅದ್ಭುತ ಕಲೆ. ಶಿಲೆಯಲ್ಲಿ ತಮ್ಮ ಕೈಚಳಕದಿಂದ ಸಿದ್ಧಪಡಿಸುವ ಮೂರ್ತಿಗಳು ನಿತ್ಯ ಪೂಜೆಗೊಳ್ಳುತ್ತವೆ. ಅಂತಹ ಅದ್ಭುತ ಕಲೆಯ ಮೂಲಕ ಲಕ್ಮೇಶ್ವರ ಭಾಗದಲ್ಲಿ ಹೆಸರು ಮಾಡಿರುವ ಶಿಗ್ಲಿ ಗ್ರಾಮದ ಅಪರೂಪದ ಶಿಲ್ಪಿ ಚಂದ್ರು ಪತ್ತಾರ. ಇದೀಗ ಅವರು ತಯಾರಿಸಿದ ದೇವಿಯ ಮೂರ್ತಿಯೊಂದು ಮಧ್ಯಪ್ರದೇಶದ ಇಂಧೋರ್‌ನಲ್ಲಿ ಸ್ಥಾಪನೆಗೊಳ್ಳಲಿದ್ದು, ಶಿಗ್ಲಿಯ ಕೀರ್ತಿಗೆ ಗರಿ ಮೂಡಿಸಿದಂತಾಗಿದೆ.
ಕಲೆ ಎಲ್ಲರಿಗೂ ಒಲಿಯವುದಿಲ್ಲ. ಅದನ್ನು ಒಲಿಸಿಕೊಳ್ಳಲು ನಿರಂತರ ಸಾಧನೆ ಅಗತ್ಯ ಎನ್ನುವಂತೆ ಚಂದ್ರು ಪತ್ತಾರ ಅವರು ಅಪರೂಪದ ಶಿಲ್ಪಿಯಾಗಿದ್ದು, ಸುಮಾರು 12-13 ವರ್ಷಗಳಿಂದ ಈ ಕಲೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ನೂರಾರು ಮೂರ್ತಿಗಳನ್ನು ಹಾಗೂ ರಥಗಳನ್ನು ಸಿದ್ಧಪಡಿಸಿರುವ ಇವರು ತಮ್ಮ ರಚನೆಗಳ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಅದನ್ನು ನೋಡಿದ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಕಳೆದ 2 ತಿಂಗಳ ಹಿಂದೆ ಮಧ್ಯಪ್ರದೇಶದ ಇಂಧೋರ್‌ನಲ್ಲಿನ ಜನರು ಇವರ ಕಲೆಯನ್ನು ಕಂಡು ಅದರಲ್ಲಿನ ದೂರವಾಣಿ ಸಂಖ್ಯೆಯಿAದ ಚಂದ್ರು ಪತ್ತಾರ ಅವರನ್ನು ಸಂಪರ್ಕಿಸಿ, ಅಷ್ಟಭುಜಗಳುಳ್ಳ ದುರ್ಗಾ ಮಾತೆಯ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ಮಾಡಿಕೊಡಲು ವಿನಂತಿಸಿದ್ದರು.
ಮೂರ್ತಿಯ ಸ್ಪಷ್ಟ ಚಿತ್ರಣಕ್ಕಾಗಿ ಚಂದ್ರು ಪತ್ತಾರ ಮೊದಲು ಅವರಿಗೆ ವಾಟ್ಸಪ್ ಮೂಲಕ ದುರ್ಗಾಮಾತೆಯ ಮೂರ್ತಿಯ ಚಿತ್ರವನ್ನು ತೆಗೆದು ಕಳಿಸಿದಾಗ ಅದರಂತೆ ಶಿಲೆಯಲ್ಲಿ ಮೂರ್ತಿಯನ್ನು ಸಿದ್ಧಪಡಿಸಿಲು ಸೂಚಿಸಿದ್ದರು. ಎರಡು ತಿಂಗಳ ಸತತ ಪರಿಶ್ರಮದಿಂದ ಮೂರ್ತಿಯನ್ನು ಸಿದ್ಧಪಡಿಸಲಾಗಿದ್ದು, ನಿರೀಕ್ಷೆಗೂ ಮೀರಿ ಅದ್ಭುತವಾಗಿ ಮೂರ್ತಿ ಮೂಡಿ ಬಂದಿದೆ. ಇದೀಗ ಮೂರ್ತಿಯನ್ನು ಬೆಂಗಳೂರಿನಿAದ ರೈಲ್ವೆ ಮುಖಾಂತರ ಮಧ್ಯಪ್ರದೇಶ ರಾಜ್ಯದ ಇಂಧೋರ್‌ಗೆ ಕಳಿಸಿಕೊಟ್ಟಿದ್ದು, ಅವರ ಕುಟುಂಬದವರ ಮೊಗದಲ್ಲಿ ಸಂತಸ ಮೂಡಿಸಿದೆ. ಅಲ್ಲಿ ಮೂರ್ತಿಯನ್ನು ಪಡೆದುಕೊಂಡವರು ಪತ್ತಾರರನ್ನು ಸಂಪರ್ಕಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕಲೆಗೆ ಶುಭ ಹಾರೈಸಿದ್ದಾರೆ.
ಶಿಗ್ಲಿ ಎಂಬ ಸಣ್ಣ ಗ್ರಾಮದಿಂದ ಮಧ್ಯಪ್ರದೇಶದ ಇಂಧೋರ್‌ವರೆಗೂ ನಮ್ಮಲ್ಲಿ ಸಿದ್ಧವಾದ ಮೂರ್ತಿಯನ್ನು ಸ್ಥಾಪಿಸಲು ತೆಗೆದುಕೊಂಡು ಹೋಗಿರುವದು ನಿಜಕ್ಕೂ ನಮ್ಮ ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ. ಕಲೆ ಎನ್ನುವುದು ಒಂದು ತಪಸ್ಸು. ಅದನ್ನು ಮನಸಾರೆ ಮಾಡಿದರೆ ಕಲಾದೇವಿ ನಮ್ಮ ಕೈ ಹಿಡಿದು ನಡೆಸುತ್ತಾಳೆ ಎನ್ನುವದಕ್ಕೆ ಬೇರೆ ರಾಜ್ಯದಲ್ಲಿ ನಮ್ಮ ಕಲೆಗೆ ಬೆಲೆ ದೊರಕಿರುವದೇ ಸಾಕ್ಷಿಯಾಗಿದೆ.
– ಚಂದ್ರು ಪತ್ತಾರ.
ಶಿಲ್ಪಿ, ಶಿಗ್ಲಿ.
ಚಂದ್ರು ಪತ್ತಾರ ನಮ್ಮ ಭಾಗದಲ್ಲಿಯೇ ಹೆಮ್ಮೆಯ ಕಲಾವಿದರಾಗಿದ್ದು, ಇವರಲ್ಲಿ ಸಿದ್ಧವಾದ ಅನೇಕ ತೇರುಗಳು, ಮೂರ್ತಿಗಳು ರಾಜ್ಯದಲ್ಲಿಯೇ ಹೆಸರು ಮಾಡಿದೆ. ಇದೀಗ ಮಧ್ಯಪ್ರದೇಶದವರೆಗೂ ಶಿಗ್ಲಿಯ ಕಲೆ ತಲುಪಿರುವದು ನಮ್ಮ ಭಾಗಕ್ಕೆ ಸಂದ ಗೌರವವಾಗಿದೆ. ಇದಕ್ಕೆ ಶಿಗ್ಲಿಯ ಸಮಸ್ತ ನಾಗರಿಕರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.
– ವೀರಣ್ಣ ಪವಾಡದ.
ಸಮಾಜ ಸೇವಕರು.