ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ಏಷ್ಯಾಕಪ್ 2025ರ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡವು ಗುಂಪು ಹಂತದಲ್ಲಿ, ನಂತರ ಸೂಪರ್ 4 ಸುತ್ತಿನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಇದೀಗ ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಲು ಸಜ್ಜಾಗಿವೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯುವುದಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ತಂಡ ಮಾಡಿರದ ದಾಖಲೆಯನ್ನು ನಿರ್ಮಿಸಲಿದೆ.
ಈ ಫೈನಲ್ ಭಾರತ ತಂಡಕ್ಕೆ ವಿಶೇಷವಾಗಿರುತ್ತದೆ. ಏಕೆಂದರೆ ಸೂರ್ಯಕುಮಾರ್ ಪಡೆಗೆ ಇತಿಹಾಸ ನಿರ್ಮಿಸುವ ಅವಕಾಶವಿದೆ. ಈ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆದ್ದರೆ, ಒಂದೇ ಟೂರ್ನಮೆಂಟ್‌ನಲ್ಲಿ ತಂಡವೊಂದು ಮೂರು ಬಾರಿ ಒಂದೇ ಎದುರಾಳಿಯನ್ನು ಸೋಲಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಲಿದೆ. ಐದು ಅಥವಾ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ಟೂರ್ನಿಗಳಲ್ಲಿ, ಎರಡು ತಂಡಗಳು ಪರಸ್ಪರ ಮೂರು ಬಾರಿ ಮುಖಾಮುಖಿಯಾದ ಎರಡು ನಿದರ್ಶನಗಳು ಮಾತ್ರ ಇವೆ.
ಮೊದಲನೆಯದಾಗಿ, 1983 ರ ವಿಶ್ವಕಪ್‌ನಲ್ಲಿ, ಭಾರತ ಮತ್ತು ವೆಸ್ಟ್ ಇಂಡೀಸ್ ಮೂರು ಬಾರಿ ಮುಖಾಮುಖಿಯಾಗಿದ್ದವು. ಆ ವೇಳೆ ಭಾರತ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಒಂದು ಪಂದ್ಯವನ್ನು ಗೆದ್ದುಕೊಂಡಿತ್ತು. ನಂತರ, 2004 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಮೂರು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಶ್ರೀಲಂಕಾ ಎರಡು ಪಂದ್ಯಗಳನ್ನು ಗೆದ್ದುಕೊಂಡರೆ, ಭಾರತ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇದೀಗ ಈ ಫೈನಲ್‌ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಹ್ಯಾಟ್ರಿಕ್ ಗೆಲುವು ಸಾಧಿಸಿದಂತ್ತಾಗುತ್ತದೆ.