ದುಬೈ: ಏಷ್ಯಾಕಪ್ ಟ್ರೋಫಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಪುರುಷರ ಏಷ್ಯಾಕಪ್ ಫೈನಲ್ ಬಳಿಕ ನಡೆದಿದ್ದ ಹೈಡ್ರಾಮಾ ಇದೀಗ ಮಹಿಳಾ ಏಷ್ಯಾಕಪ್ ಫೈನಲ್ನಲ್ಲೂ ಮರುಕಳಿಸಿದೆ.
ಭಾನುವಾರ ನಡೆದ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 72 ರನ್ಗಳಿಂದ ಮಣಿಸಿದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ದಾಖಲೆಯ ಎಂಟನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿದೆ. ಆದರೆ ಪಂದ್ಯ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಭಾರತೀಯ ಕಾಲಮಾನ ರಾತ್ರಿ 11:20ರ ಸುಮಾರಿಗೆ ಪಂದ್ಯ ಮುಕ್ತಾಯಗೊಂಡರೂ, ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯರಾತ್ರಿ 12:05ರ ವೇಳೆಗೆ ಆರಂಭವಾಯಿತು. ನಿರೂಪಕ ಹಾಗೂ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಫರ್ವೀಜ್ ಮಹರೂಫ್ ಮೊದಲು ರನ್ನರ್-ಅಪ್ ಶ್ರೀಲಂಕಾ ತಂಡವನ್ನು ವೇದಿಕೆಗೆ ಆಹ್ವಾನಿಸಿದರು.
ಈ ವೇಳೆ ಮೊಹ್ಸಿನ್ ನಖ್ವಿ ಶ್ರೀಲಂಕಾ ತಂಡಕ್ಕೆ ಚೆಕ್ ಹಸ್ತಾಂತರಿಸಿದರು. ಶ್ರೀಲಂಕಾ ಕ್ರಿಕೆಟ್ನ ಮಧ್ಯಂತರ ಮುಖ್ಯಸ್ಥ ಎರಾನ್ ವಿಕ್ರಮರತ್ನೆ ಆಟಗಾರರಿಗೆ ಪದಕಗಳನ್ನು ವಿತರಿಸಿದರು. ಇದಾದ ಬಳಿಕ ಭಾರತ ತಂಡ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ ಭಾರತ ತಂಡ ವೇದಿಕೆಗೆ ಬರುವ ಮುನ್ನವೇ ನಿರೂಪಕರು ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡಿದೆ ಎಂದು ಏಕಾಏಕಿ ಘೋಷಿಸಿದರು. ಇದರಿಂದಾಗಿ ಇಡೀ ಬೆಳವಣಿಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು.
ಈ ವೇಳೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಅವರು ನಂದಿನಿ ಶರ್ಮಾಗೆ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ನೀಡಿ ತಂಡವನ್ನು ಅಭಿನಂದಿಸಿದರು. ಬಳಿಕ ಭಾರತ ತಂಡದ ಆಟಗಾರ್ತಿಯರು ಡ್ರೆಸ್ಸಿಂಗ್ ರೂಮ್ಗೆ ಮರಳಿದರು.
ಮಾಹಿತಿಯ ಪ್ರಕಾರ, ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಭಾರತ ತಂಡಕ್ಕೆ ಟ್ರೋಫಿ ಕೊಡಿಸುವಂತೆ ಬಿಸಿಸಿಐ ಮನವಿ ಮಾಡಿತ್ತು. ಆದರೆ ಮೊಹ್ಸಿನ್ ನಖ್ವಿ ತಾವೇ ಟ್ರೋಫಿ ಹಸ್ತಾಂತರಿಸುವುದಾಗಿ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವೇದಿಕೆಗೆ ತೆರಳದೆ ಡ್ರೆಸ್ಸಿಂಗ್ ರೂಮ್ನಲ್ಲೇ ಉಳಿದುಕೊಂಡಿತು.
ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡು ಬಹುತೇಕ ಎಲ್ಲರೂ ಕ್ರೀಡಾಂಗಣದಿಂದ ನಿರ್ಗಮಿಸಿದ ಬಳಿಕ, ಭಾರತ ತಂಡದ ಆಟಗಾರ್ತಿಯರು ಹಾಗೂ ಕೋಚಿಂಗ್ ಸ್ಟಾಫ್ ಖಾಲಿ ಸ್ಟೇಡಿಯಂನಲ್ಲಿ ಒಟ್ಟಾಗಿ ನಿಂತು ಗ್ರೂಪ್ ಫೋಟೋ ತೆಗೆಸಿಕೊಂಡರು. ಈ ಫೋಟೋಗಳನ್ನು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಯಿತು.
ಸಾಮಾನ್ಯವಾಗಿ ಪ್ರಶಸ್ತಿ ಪ್ರದಾನ ಸಮಾರಂಭದ ಕೊನೆಯಲ್ಲಿ ವಿಜೇತ ತಂಡದ ನಾಯಕಿಯ ಸಂದರ್ಶನ ನಡೆಯುತ್ತದೆ. ಆದರೆ ಈ ಬಾರಿ ಪಂದ್ಯ ಮುಗಿದ ತಕ್ಷಣವೇ ಬ್ರಾಡ್ಕಾಸ್ಟರ್ಗಳು ಹರ್ಮನ್ಪ್ರೀತ್ ಕೌರ್ ಅವರ ಸಂದರ್ಶನ ನಡೆಸಿದ್ದರು. ಇನ್ನು ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐ ತೆಗೆದುಕೊಂಡ ಅಧಿಕೃತ ನಿಲುವು ಎಂದು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ 2025ರ ಸೆಪ್ಟೆಂಬರ್ 28ರಂದು ಇದೇ ದುಬೈ ಮೈದಾನದಲ್ಲಿ ನಡೆದ ಪುರುಷರ ಏಷ್ಯಾಕಪ್ ಫೈನಲ್ ಬಳಿಕವೂ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಇಂತಹದ್ದೇ ವಿವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಕ್ಕಟ್ಟು ನಿರ್ಮಾಣವಾಗಿತ್ತು.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟ್ರೋಫಿ ಸ್ವೀಕರಿಸದೆ ವೇದಿಕೆಯಲ್ಲಿ ಸಂಭ್ರಮಿಸಿತ್ತು. ಬಳಿಕ ಏಷ್ಯಾಕಪ್ ಟ್ರೋಫಿಯನ್ನು ಕ್ರೀಡಾಂಗಣದಿಂದ ಎಸಿಸಿ ಕಚೇರಿಗೆ ಕೊಂಡೊಯ್ಯಲಾಗಿತ್ತು ಎಂಬ ವರದಿಗಳಿದ್ದವು. ಇದೀಗ ಮಹಿಳಾ ತಂಡದ ಏಷ್ಯಾಕಪ್ ಗೆಲುವಿನ ಬಳಿಕವೂ ಇದೇ ರೀತಿಯ ಬೆಳವಣಿಗೆ ನಡೆದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.



