ಕೆಲ ವರ್ಷ ಪ್ರಸಾರ ಕಂಡಿದ್ದ ‘ನೇತ್ರಾವತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್ ಒಂದು ಮದುವೆ ಆಗಿ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ಪತ್ನಿಗೆ ಥಳಿಸಿದ್ದಾರೆ ಎನ್ನಲಾಗಿದೆ.
2024 ಜನವರಿಯಲ್ಲಿ ಯುವತಿಗೆ ಮಹಿಪಾಲ್ ಪರಿಚಯ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಶುರುವಾಗಿದೆ. ಬಳಿಕ ಅವರನ್ನು ಸನ್ನಿ ಪ್ರೀತಿ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಮದುವೆಯಾಗೋದಾಗಿ ನಂಬಿಸಿದ್ದರು. ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ವಿವಾಹ ಆದರು. ಸದ್ಯ ಮಹಿಳೆ ಎರಡು ತಿಂಗಳ ಗರ್ಭಿಣಿ.
ಮದುವೆಯಾದ ಬಳಿಕ ಇಬ್ಬರೂ ಒಟ್ಟಿಗೆ ಇಲ್ಲ. ಪೋಷಕರನ್ನ ಒಪ್ಪಿಸಿ ಬರುವೆ ಎಂದು ಸನ್ನಿ ಮಹಿಪಾಲ್ ತೆರಳಿದ್ದರು. ಅಷ್ಟೇ ಅಲ್ಲ, ಕೇವಲ ಸ್ನೇಹಿತೆಯ ರೀತಿ ಇರಬೇಕು ಎಂದು ಪತ್ನಿಗೆ ಮಹಿಪಾಲ್ ಷರತ್ತು ಹಾಕಿದ್ದರು.
ಅದರಂತೆಯೇ ಆ ಯುವತಿ ನಡೆದುಕೊಂಡಿದ್ದಾರೆ. ಶಾಕಿಂಗ್ ಎಂದರೆ ಕೆಲವೇ ದಿನಗಳ ಹಿಂದೆ ಮಹಿಪಾಲ್ ಬೇರೆ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಲು ಅವರ ಪತ್ನಿ ಜುಲೈ 22ರಂದು ರಾತ್ರಿ ವಿಜ್ಞಾನನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಈ ವೇಳೆ ಗಲಾಟೆಯಾಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.
ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಗಲಾಟೆಯಲ್ಲಿ ಗರ್ಭಪಾತ ಆಗಿರೋದಾಗಿ ಪತ್ನಿ ಹೇಳಿಕೆ ನೀಡಿದ್ದಾರೆ. ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿದೆ ಎಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ.



