ಧಾರವಾಡ: ಅಂಡಮಾನ್–ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಧಾರವಾಡದ ಕೆಸಿಡಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತರನ್ನು ಎಸ್. ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಅವರು ಕೆಸಿಡಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಾವೇರಿ ಹಾಸ್ಟೆಲ್ ವಾರ್ಡನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅನ್ನಪೂರ್ಣ ಅವರು ಮೂರು ದಿನಗಳ ಹಿಂದೆ ಕುಟುಂಬದೊಂದಿಗೆ ಅಂಡಮಾನ್–ನಿಕೋಬಾರ್‌ನ ಫೋರ್ಟ್ ಬ್ಲೇರ್‌ಗೆ ಪ್ರವಾಸಕ್ಕೆ ತೆರಳಿದ್ದರು. ಶನಿವಾರ ರಾತ್ರಿ ಅಸ್ವಸ್ಥರಾಗಿದ್ದ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಧಾರವಾಡಕ್ಕೆ ತರಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದು, ಸೋಮವಾರ ನಗರಕ್ಕೆ ತರಲಾಗುವ ಸಾಧ್ಯತೆ ಇದೆ. ಅನ್ನಪೂರ್ಣ ಅವರ ಅಕಾಲಿಕ ನಿಧನಕ್ಕೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



