ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಉದ್ರಿ ಸರ್ಕಾರವಾಗಿದ್ದು, ಎಲ್ಲರಿಗೂ ಉದ್ರಿ ಹೇಳುತ್ತಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಲೇವಡಿ ಮಾತನಾಡಿದರು.
ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 13 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಗೃಹಲಕ್ಷ್ಮಿ ಯೋಜನೆ, ಸರ್ಕಾರಿ ವೇತನ, ಸರ್ಕಾರಿ ಗುತ್ತಿಗೆದಾರರ ಹಣ ಬಿಡುಗಡೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ನೀಡದೇ ಎಲ್ಲವನ್ನೂ ಮಾಡುತ್ತೇವೆ ಎಂದು ಉದ್ರಿ ಹೇಳುತ್ತಲೇ ಹೋಗುತ್ತಿದ್ದಾರೆ.
ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶೇ. 40 ಕಮಿಶನ್ ಸರ್ಕಾರ ಎಂದು ಆರೋಪಿಸಿತ್ತು. ಕಾಂಗ್ರೆಸ್ ಸರ್ಕಾರ ಶೇ. 80ರ ಕಮಿಶನ್ ಸರ್ಕಾರವಾಗಿದೆ ಎಂದು ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ನೆಪ ಮಾಡಿಕೊಂಡು ರಾಜ್ಯದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಬೆಲೆ ಏರಿಕೆ ಮಾಡುತ್ತಿದ್ದಾರೆ. ಜೊತೆಗೆ, ರೈತರಿಗೆ ಇದುವರೆಗೂ ನಯಾ ಪೈಸೆ ಪ್ರೋತ್ಸಾಹ ಧನ ನೀಡಿಲ್ಲ. ಒಂದು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಅಪ್ಪಣ್ಣವರ, ಎಮ್.ಎಸ್. ಪರ್ವತಗೌಡ್ರ, ರಮೇಶ್ ಹುಣಸಿಮರದ, ಮರಿಯಪ್ಪ ಬಳ್ಳಾರಿ, ಪ್ರಫುಲ್ ಪುಣೇಕರ ಉಪಸ್ಥಿತರಿದ್ದರು.
2024ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಸಮಯದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾದರೆ ಭಕ್ತರಿಗೆ 1008 ಹೋಳಿಗೆ ಊಟ ಹಾಕಿಸಲಾಗುವುದು ಎಂದು ಗುರು ಪುಟ್ಟರಾಜ ಕವಿ ಗವಾಯಿಗಳಿಗೆ ಹರಕೆ ಮಾಡಿಕೊಂಡಿದ್ದೆವು. ಈಗ ಕುಮಾರಸ್ವಾಮಿ ಜಯಿಸಿ ಕೇಂದ್ರ ಮಂತ್ರಿ ಆಗಿದ್ದಾರೆ. ಅದಕ್ಕಾಗಿ ಜುಲೈ 18ರಂದು ಪುಟ್ಟರಾಜ ಗವಾಯಿ ಮಠದಲ್ಲಿ ಹರಕೆ ತೀರಿಸುವ ಕಾರ್ಯ ಮಾಡಲಾಗುತ್ತದೆ ಎಂದು ವ್ಹಿ.ಆರ್. ಗೋವಿಂದಗೌಡ್ರ ಮಾಹಿತಿ ನೀಡಿದರು.
ಅಭಿಪ್ರಾಯ ಸಂಗ್ರಹ
ಗದಗ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಸಾರ್ವಜನಿಕರಿಂದ ಸಂಗ್ರಹವಾಗುವ ಅಭಿಪ್ರಾಯದ ಆಧಾರದಲ್ಲಿ ವಿಶೇಷವಾದ ಮನವಿಯನ್ನು ಸಿದ್ಧಪಡಿಸಿ, ಕೇಂದ್ರ ಸಚಿವರಿಗೆ ಸಲ್ಲಿಸಲಾಗುವುದು. ಅದಕ್ಕಾಗಿ ಜಿಲ್ಲೆಯ ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಾಟ್ಸಪ್ ಹಾಗೂ ಇಮೇಲ್ ಮುಖಾಂತರ ಅಭಿಪ್ರಾಯವನ್ನು ಕಳಿಸಬೇಕು. ಅದಕ್ಕಾಗಿ ಸಾರ್ವಜನಿಕರು ವಾಟ್ಸಪ್-8495900009, ಇಮೇಲ್- youngindia@gmail.com ವಿಳಾಸಕ್ಕೆ ತಮ್ಮ ಮಾಹಿತಿಯನ್ನು ಜುಲೈ ೨೦ರ ಒಳಗೆ ಸಲ್ಲಿಸಬೇಕು ಎಂದು ಗೋವಿಂದಗೌಡ್ರ ವಿನಂತಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ನೀತಿ ಹಾಗೂ ವಿವಿಧ ಇಲಾಖೆಗಳಲ್ಲಿ ದುಡಿಯುವ ವರ್ಗಕ್ಕೆ ವೇತನ ನೀಡದೆ ಇರುವುದನ್ನು ಖಂಡಿಸಿ ಗದಗ ಜಿಲ್ಲಾ ಜೆಡಿಎಸ್ ಘಟಕದಿಂದ ಜುಲೈ 12ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
-ವಿ.ಆರ್. ಗೋವಿಂದಗೌಡ್ರ.
ಜೆಡಿಎಸ್ ರಾಜ್ಯ ವಕ್ತಾರ.