ತುಮಕೂರು:- ಇಲ್ಲಿನ ಸಿದ್ದಾರ್ಥ ವಿದ್ಯಾ ಸಂಸ್ಥೆ ಮೇಲೆ ಬುಧವಾರ ತಾನೇ ದಾಳಿ ನಡೆಸಿದ್ದ ಇ.ಡಿ ತಂಡವು, ಇಂದು ಕೂಡ ಪರಿಶೀಲನೆ ಮುಂದುವರಿಸಿದ್ದು, ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇಂದು ಬೆಳಗ್ಗೆಯಿಂದಲೂ ಅಧಿಕಾರಿಗಳು ಕಾಲೇಜಿನ ಆವರಣದಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆ ಕೂಡ ನಿಯೋಜನೆ ಮಾಡಲಾಗಿದೆ. ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರನ್ನು ಒಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗುತ್ತಿದೆ.
ಬುಧವಾರ ಬೆಳಗ್ಗೆ ಐದು ತಂಡಗಳಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಬಹುತೇಕ ಮಧ್ಯ ರಾತ್ರಿವರೆಗೂ ಅಧಿಕಾರಿಗಳು ನಿರಂತರವಾಗಿ ದಾಖಲೆಗಳ ಪರಿಶೀಲನೆ ನಡೆಸಿದ್ದು ಗಮನಾರ್ಹವಾಗಿದೆ.
ಇನ್ನೂ ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮೇಲಿನ ಇಡಿ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.