ಗದಗ:- ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಹಣ ದೋಚಿ ಪರಾರಿಯಾಗಿರುವ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ಜರುಗಿದೆ.
ಬೈಕ್‌ಗೆ ಡಿಕ್ಕಿ ಹೊಡೆದು ನೆಲಕ್ಕೆ ಕೆಡವಿದ ದುಷ್ಕರ್ಮಿಗಳು, ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಮೈಮೆಲಿನ ಶರ್ಟ್ ಹರಿದು 50 ಸಾವಿರ ಹಣ ದೋಚಿದ್ದಾರೆ.
ಸಾರ್ವಜನಿಕರು ಓಡಿ ಬರುತ್ತಿದ್ದಂತೆ ದುಷ್ಕರ್ಮಿಗಳು ‘ನಿಂದು ಬಹಳ ಆಗಿದೆ’ ಎಂದು ಅವಾಜ್ ಹಾಕಿ ಎಸ್ಕೇಪ್ ಆಗಿದ್ದಾರೆ. ಇದೆ ಮಾತು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಎರಡು ದಿನಗಳ ಹಿಂದೆ ಗದಗ ಜಿಲ್ಲಾ ನಾಯಕರ ವಿರುದ್ಧ ಕಾಂತಿಲಾಲ್ ಬನ್ಸಾಲಿ ವಾಗ್ದಾಳಿ ಮಾಡಿದ್ದರು. ‘ಮಕ್ಕಳನ್ನು ಬೆಳೆಸಬೇಡಿ, ಕಾರ್ಯಕರ್ತರನ್ನು ಬೆಳೆಸಿ ಎಂದಿದ್ದರು. ಈ ಹೇಳಿಕೆ ನೀಡಿದ ಎರಡನೇ ದಿನದಲ್ಲಿ ಈ ಅಟ್ಯಾಕ್ ನಡೆದಿದ್ದು, ಬಿಜೆಪಿಯಲ್ಲೇ ಯಾರಾದರೂ ಹೆದರಿಸಲು ಈ ಅಟ್ಯಾಕ್ ಮಾಡಿಸಿದ್ದಾರೆ ಎನ್ನುವ ಗುಸುಗುಸು ನಡೆದಿದೆ.
ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಹಲ್ಲೆಗೊಳಗಾದ ಕಾಂತಿಲಾಲ್ ಬನ್ಸಾಲಿ, ‘ದುಷ್ಕರ್ಮಿಗಳು ನನ್ನ ಬೈಕ್‌ಗೆ ಡಿಕ್ಕಿ ಹೊಡೆದರು. ಅಷ್ಟೇ, ಏಕಾಏಕಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿ ನನ್ನ ಬಳಿ ಇದ್ದ 50 ಹಣ ದೋಚಿ, ‘ನಿಂದು ಬಹಳ ಆಗಿದೆ ಎಂದು ಹೆದರಿಸಿ ಪರಾರಿಯಾದರು ಎಂದು ಹೇಳಿದ್ದಾರೆ.
ಹಾಡಹಗಲೇ ಉದ್ಯಮಿಯೂ ಆದ ಬಿಜೆಪಿ ಮುಖಂಡ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆಯಾಗಿದ್ದು, ಉದ್ಯಮಿಗಳಲ್ಲೂ ಆತಂಕ ಹೆಚ್ಚಿದೆ. ಇದು ಹಣಕ್ಕೆ ಮಾಡಿದ ಹಲ್ಲೆಯೋ, ರಾಜಕೀಯ ದ್ವೇಷದ ಹಲ್ಲೆಯೋ ಎನ್ನುವ ಚರ್ಚೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಸ್ವಪಕ್ಷದ ರಾಜಕೀಯ ವಿರೋಧಿಗಳು ಮಾಡಿಸಿದ ಹಲ್ಲೆ ಎಂಬ ಗುಮಾನಿಯೂ ಹಬ್ಬಿದೆ.
ಇತ್ತೀಚೆಗೆ ಗದಗ ಕ್ಷೇತ್ರದ ಬಿಜೆಪಿ ಬೆಳವಣಿಗೆ ಬಗ್ಗೆ ಬಹಿರಂಗವಾಗಿ ಕಾಂತಿಲಾಲ್ ಮಾತನಾಡಿದ್ದಾರಂತೆ. ಹೀಗಾಗಿ ಯಾರಾದರೂ ಹೆದರಿಸಲು ಹಲ್ಲೆ ಮಾಡಿಸಿದ್ದಾರಾ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.