ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀದೇವಿ ಪುರಾಣ ಕೇಳುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಸಿರಿ-ಸಂಪತ್ತು ಅಧಿಕವಾಗುತ್ತದೆ. ಜೀವನದಲ್ಲಿ ನೀತಿ, ಧರ್ಮ, ಆಚಾರ, ವಿಚಾರದಿಂದ ನಡೆಯದಿದ್ದರೆ ಕಷ್ಟ ಬರುತ್ತದೆ. ಪರಮಾತ್ಮನ ಚಿಂತನೆ ಮಾಡಿದರೆ ಮುಕ್ತಿ ದೊರೆಯುತ್ತದೆ ಎಂದು ದತ್ತಾ ಪ್ರಾಪರ್ಟಿಸ್ ನಿರ್ದೇಶಕ ಶಂಕರಗೌಡ ಹ.ಶಿವನಗೌಡ್ರ ಹೇಳಿದರು.
ನಗರದ ಮುಳಗುಂದನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್.ಎಚ್. ಶಿವನಗೌಡ್ರ ಮಾತನಾಡಿ, ಮನುಕುಲದ ಸರ್ವಾಂಗೀಣ ಏಳ್ಗೆಗಾಗಿ ಶ್ರೀದೇವಿ ಆರಾಧನೆ ಮುಖ್ಯವಾಗಿದೆ. ಹೀಗಾಗಿ ಪೂರ್ವಜರು ಪರಂಪರಾಗತವಾಗಿ ಶ್ರೀದೇವಿ ಆರಾಧನೆ, ದೇವಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂಸ್ಕೃತಿ ಮುಂದಿನ ಪೀಳಿಗೆಗೂ ಮುಂದುವರೆದು ಕೊಂಡು ಸಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸುಮಾ ಶಿವನಗೌಡ್ರ, ಗಣ್ಯ ವ್ಯಾಪಾರಸ್ಥರಾದ ಶೈಲೇಂದ್ರಕುಮಾರ ಶಹಾ, ದೀಪ್ತಿ ಶಹಾ, ಡಾ. ಶಶಿಕಾಂತ ಡಿ. ಹಿರೇಮಠ, ಡಾ. ಸ್ಪರ್ಶಾ ಶಶಿಕಾಂತ ಹಿರೇಮಠ ಪಾಲ್ಗೊಂಡಿದ್ದರು. ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಅಧ್ಯಕ್ಷ ಸದಾಶಿವಯ್ಯ ಮದರಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ ಮುಂತಾದ ಗಣ್ಯರು ವೇದಿಕೆಯಲ್ಲಿದ್ದರು.
ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ನಡೆಯಿತು. ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ಪಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರಗಿ, ಶರಣಕುಮಾರ ಗುತ್ತರಗಿ, ಎಸ್.ಬಿ. ಭಜಂತ್ರಿ ಸಂಗೀತ ಸೇವೆ ನೀಡಿದರು.
ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿ ಮಠ, ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಗೀತಾ ಎಂ. ಹೂಗಾರ, ಸಹ ಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಬಿ.ಬಿ. ತೋಟಗೇರ ಸ್ವಾಗತಿಸಿದರು. ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು. ಉಮಾಪತಿ ಭೂಸನೂರಮಠ ವಂದಿಸಿದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಮಾತನಾಡಿ, ದುಷ್ಟರಿಗೆ ಶಿಕ್ಷೆ, ಶಿಷ್ಟರ ಪರಿಪಾಲನೆಗೈಯುವ ಶಕ್ತಿ ಸ್ವರೂಪಳಾದ ಮಾತಾ ದುರ್ಗಾದೇವಿಯ ಆರಾಧನೆಯ ಹಬ್ಬವೇ ನವರಾತ್ರಿ. ಈ ಹಬ್ಬದಲ್ಲಿ ದೇವಿಯನ್ನು ಶಕ್ತಿಯ ನಾನಾ ರೂಪದಲ್ಲಿ ಆರಾಧಿಸಲಾಗುತ್ತದೆ. ದೇವಿ ಮಹಿಷಾಸುರನನ್ನು ವಧೆಗೈದಿದ್ದು, ದುಷ್ಟಗುಣಗಳನ್ನು ದೂರ ಮಾಡಿ ಸಾತ್ವಿಕತೆ ರೂಢಿಸಿಕೊಳ್ಳಬೇಕು ಎಂಬ ಸಂಕೇತ ನೀಡುತ್ತದೆ ಎಂದು ಹೇಳಿದರು.