ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣದ ಶ್ರೇಷ್ಠ ಕಾಲದಲ್ಲಿ ದೇವಮಾನವರು, ಮಹಾತ್ಮರು, ಶರಣರು, ಸಂತರು, ಪುಣ್ಯ ಪುರುಷರ ಪುರಾಣ ಪ್ರವಚನ ಕೇಳುವುದರಿಂದ ಮನುಷ್ಯನ ದುಃಖ-ದುಮ್ಮಾನ, ಕಷ್ಟ-ಕಾರ್ಪಣ್ಯ, ಪಾಪ ಕರ್ಮಗಳು ಕಳೆದು ಶಾಂತಿ, ನೆಮ್ಮದಿ, ಪುಣ್ಯ ಪ್ರಾಪ್ತಿಯಾಗುತ್ತದೆ ಮತ್ತು ಸದ್ವಿಚಾರ, ಸದ್ಗುಣಗಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ಪಟ್ಟಣದ ಶ್ರೀ ಸೋಮೇಶ್ವರ ಪುರಾಣ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬದುಕಿನ ಜಂಜಾಟದ ನಡುವೆ ಧರ್ಮಕಾರ್ಯ, ಸತ್ಸಂಗ, ಪುರಾಣ-ಪುಣ್ಯಕಥೆ ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ. ತಾಂತ್ರಿಕ ಜಮಾನಾ, ಧಾರಾವಾಹಿಗಳ ದುನಿಯಾದಲ್ಲಿ ಧಾರ್ಮಿಕ ನಂಬಿಕೆ, ಆಚರಣೆ ಮತ್ತು ಸಂಸ್ಕೃತಿ ಮರೆಯುತ್ತಿರುವುದು ದುರ್ದೈವದ ಸಂಗತಿ. ನಮ್ಮ ನೆಲದ ಶ್ರೇಷ್ಠತಮವಾದ ಧರ್ಮ, ಸಂಸ್ಕೃತಿ ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪುರಾಣ-ಪಠಣ ಕಾರ್ಯಕ್ರಮಗಳು ಅವಶ್ಯ. ಐತಿಹಾಸಿಕ ಪ್ರಸಿದ್ದ ಶ್ರೀ ಸೋಮೇಶ್ವರ ದೇವರ ಈ ಭಾಗದ ಭಕ್ತರ ಕಷ್ಟ-ಕಾರ್ಪಣ್ಯ ಕಳೆಯಲು ಪತ್ನಿ ಪಾರ್ವತಿ ಸಮೇತನಾಗಿ ಧರೆಗಿಳಿದು ಬಂದಿದ್ದಾನೆ. ಪುಲಿಗೆರೆಯ ನಾಡಿನಲ್ಲಿ ಜನಿಸಿರುವ ನಾವೆಲ್ಲ ಧನ್ಯರು. ಎಲ್ಲರೂ ಶ್ರಾವಣ ಮಾಸದುದ್ದಕ್ಕೂ ನಡೆಯುವ ಸೋಮೇಶ್ವರ ಪುರಾಣ ಆಲಿಸಬೇಕು ಎಂದು ಕರೆನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬಿಸಿಎನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಲೋಹಿತ ನೆಲವಗಿ ಮಾತನಾಡಿ, ಜೀವನದುದ್ದಕ್ಕೂ ಧರ್ಮ, ಪರಂಪರೆ, ಸಂಸ್ಕೃತಿ, ಸಮನ್ವಯತೆ ಹೀಗೆ ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಇಂದಿಗೂ ದಾರಿದೀಪವಾಗಿರುವವರು ಲಿಂ.ಶ್ರೀ ಸಿದ್ಧಾರೂಡ ಶರಣರು. ಇಂತವರ ಚರಿತ್ರೆಯನ್ನು ಆಲಿಸುವ ಸೌಭಾಗ್ಯ ದೊರಕಿಸಿರುವ ಇಲ್ಲಿನ ಸಮಿತಿಯವರ ಕಾರ್ಯ ಅಭಿನಂದನಾರ್ಹ. ಸೋಮೇಶ್ವರನ ಪವಿತ್ರ ಸನ್ನಿಧಾನದಲ್ಲಿ ನಡೆಸುತ್ತಿರುವ ಪುರಾಣ ಪ್ರವಚನ ನಿರಂತರವಾಗಿ ಮುನ್ನಡೆಯಲಿ ಎಂದರು.
ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಪುರಾಣ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಚಂಬಣ್ಣ ಬಾಳಿಕಾಯಿ, ಎಸ್.ಎಫ್ ಆದಿ, ಸುರೇಶ ರಾಚನಾಯ್ಕರ, ಚನ್ನಪ್ಪ ಜಗಲಿ, ಶಂಕರ ಬಾಳಿಕಾಯಿ, ವಿರೂಪಾಕ್ಷ ಆದಿ, ಮಯೂರ ಪಾಟೀಲ, ನಂದೀಶ ಬಂಡಿವಾಡ, ಬಸವರಾಜ ಮೆಣಸಿನಕಾಯಿ, ಎನ್.ಆರ್. ಸಾತಪುತೆ, ಕಾಶಪ್ಪ ಮುಳಗುಂದ, ಶಿವಪುತ್ರಪ್ಪ ಚಾಕಲಬ್ಬಿ, ಅರ್ಚಕ ಸಮೀರ ಪೂಜಾರ ಮುಂತಾದವರಿದ್ದರು.
ಜಯಪ್ರಕಾಶ ಹೊಟ್ಟಿ, ಸೋಮಶೇಖರ ಕೆರಿಮನಿ, ಜಿ.ಎಸ್. ಗುಡಗೇರಿ ನಿರ್ವಹಿಸಿದರು. ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಪಂ. ಗುರುಶಾಂತಯ್ಯ ಶಾಸ್ತ್ರಿ ಆರಾಧ್ಯಮಠ ಗವಾಯಿಗಳು ಪುರಾಣ ಪಠಣ-ಪ್ರವಚನಗೈದರೆ, ವಿಜಯಕುಮಾರ ಸುತಾರ ತಬಲಾ ಸಾಥ್ ನೀಡಿದರು.
ಆಗಸ್ಟ್ 24 ವರೆಗೆ ನಿತ್ಯ ಸಂಜೆ 7ಕ್ಕೆ ಪುರಾಣ ಕಾರ್ಯಕ್ರಮ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ಸೋಮೇಶ್ವರ ಪುರಾಣ ಸೇವಾ ಸಮಿತಿ ತಿಳಿಸಿದೆ.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮತ್ತು ಸೋಮೇಶ್ವರ ಭಕ್ತರ ಟ್ರಸ್ಟ್ನ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಶ್ರಾವಣ ಮಾಸದಲ್ಲಿ ಸತ್ಪುರುಷರ ವಿಚಾರಗಳನ್ನು ಆಲಿಸುವುದು ಮತ್ತು ಅವರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಪಾವನವಾಗುತ್ತದೆ. ಕಳೆದ 13 ವರ್ಷಗಳಿಂದ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಸುತ್ತಾ ಬರುತ್ತಿರುವ ಸಮಿತಿಯವರ ಕಾರ್ಯ ಅಭಿನಂದನಾರ್ಹ ಎಂದರು.