ರಾಮನಗರ: ಕುಡಿದ ಮತ್ತಿನಲ್ಲಿ ಅಪ್ರಾಪ್ತೆಯ ಅಪಹರಣಕ್ಕೆ ಯತ್ನಿಸಿ ಆಕೆಯೊಂದಿಗೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಯೂಟ್ಯೂಬರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಂಬಂಧಿಕರ ಮನೆಯಲ್ಲಿ ಹೊಸ ವರ್ಷ ಆಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯ ಅಪಹರಣಕ್ಕೆ ಆರೋಪಿಗಳು ಯತ್ನಿಸಿದ್ದು, ಈ ವೇಳೆ ಕುಟುಂಬಸ್ಥರೇ ಆಕೆಯ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ವಿವರ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾಗಡಿ ಪಟ್ಟಣದ ವೆಂಕಟೇಶ್ ಎಂಬಾತ ತನ್ನ ಫಾರ್ಮ್ ಹೌಸ್‌ನಲ್ಲಿ ಯಾವುದೇ ಅನುಮತಿ ಇಲ್ಲದೆ ನ್ಯೂ ಇಯರ್ ಪಾರ್ಟಿ ಆಯೋಜಿಸಿದ್ದ. ಈ ಪಾರ್ಟಿಯಲ್ಲಿ ಪ್ರಖ್ಯಾತ ಯೂಟ್ಯೂಬರ್‌ಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವೇಳೆ ತುಮಕೂರು ಜಿಲ್ಲೆಯ ಶಿರಾ ಮೂಲದ ರವಿಚಂದ್ರ ಎಂಬ ಯೂಟ್ಯೂಬರ್, ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನು ತಡೆದು ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಮಗಳು ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದು, ಈ ನಡುವೆ ಸಂತ್ರಸ್ತೆ ಸಹೋದರನಿಗೆ ಕರೆ ಮಾಡಿದ್ದಾಳೆ. ಆರೋಪಿಯ ಮೊಬೈಲ್‌ನಿಂದಲೇ ಕರೆ ಬಂದಿರುವುದು ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಯಿತು.
ಕೂಡಲೇ ಅಲರ್ಟ್ ಆದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಾರನ್ನು ಪತ್ತೆ ಮಾಡಿ ಅಡ್ಡಗಟ್ಟಿ ಬಾಲಕಿಯನ್ನು ರಕ್ಷಿಸಿದ್ದು, ಆಕ್ರೋಶದಿಂದ ಕಾರನ್ನು ಜಖಂಗೊಳಿಸಿದ್ದಾರೆ. ಪ್ರಕರಣ ಸಂಬಂಧ ಪಾರ್ಟಿ ಆಯೋಜಕ ವೆಂಕಟೇಶ್ ಹಾಗೂ ಯೂಟ್ಯೂಬರ್ ರವಿಚಂದ್ರನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಪಾರ್ಟಿಯಲ್ಲಿ ಭಾಗವಹಿಸಿ ನಂತರ ನಾಪತ್ತೆಯಾಗಿದ್ದ ಮಂಡ್ಯ ಮೂಲದ ಯೂಟ್ಯೂಬರ್‌ಗಳಾದ ಕೆಂಪ ಮತ್ತು ಕಬ್ಜ ಶರಣ ಬಳಿಕ ಪೊಲೀಸ್ ಠಾಣೆಗೆ ಬಂದಿದ್ದು, ಆಕ್ರೋಶಗೊಂಡ ಸ್ಥಳೀಯರು ಇವರಿಬ್ಬರಿಗೂ ಧರ್ಮದೇಟು ನೀಡಿದ್ದಾರೆ. ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.



