ಬೆಂಗಳೂರು: ಉತ್ತರ ಪ್ರದೇಶದ ಶಿವಸೇನೆ ಪಕ್ಷದ ಮಾಜಿ ಶಾಸಕ ಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ ವಿರುದ್ಧ ಬೆಂಗಳೂರಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆಗಸ್ಟ್ 14ರಂದು ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ಮಾಜಿ ಶಾಸಕರಾದ ಭಗವಾನ್ ಶರ್ಮಾ ಅವರು ಅವರನ್ನು ನಗರದ ಹಲವು ಕಡೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಆಗಸ್ಟ್ 16ರಂದು ಚಿತ್ರದುರ್ಗಕ್ಕೂ ಭೇಟಿ ನೀಡಿದ ಬಳಿಕ, ವಾಪಸ್ ಉತ್ತರ ಪ್ರದೇಶಕ್ಕೆ ಹೊರಡುವ ಮುನ್ನ ಏರ್ ಪೋರ್ಟ್ ಠಾಣಾ ವ್ಯಾಪ್ತಿಯ ತಾಜ್ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದಾರೆ.
ಅದೇ ವೇಳೆ ಮಹಿಳೆಯ ಮೇಲೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದು, ವಿರೋಧ ವ್ಯಕ್ತಪಡಿಸಿದಾಗ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅತ್ಯಾಚಾರ ಯತ್ನ ಹಾಗೂ ಕೊಲೆ ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ಪ್ರಸ್ತುತ ಪೊಲೀಸರು ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ್ದಾರೆ.