ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನೊಳಗೆ ಅಕ್ರಮವಾಗಿ ಬೀಡಿ, ಸಿಗರೇಟ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ ಮೂವರನ್ನು ಜೈಲು ಭದ್ರತಾ ಪಡೆ ರೆಡ್‌ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ಜೈಲಿನೊಳಗೆ ಬಿಡಿ, ಸಿಗರೇಟ್ ಮತ್ತು ಇತರೆ ಪ್ಯಾಕ್ ಮಾಡಿದ ವಸ್ತುಗಳನ್ನು ಎಸೆಯುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಜೈಲು ಆವರಣದ ಬಳಿ ಬಂದಿದ್ದರು. ಜೈಲು ಕಾಂಪೌಂಡ್ ಮೇಲಿಂದ ವಸ್ತುಗಳನ್ನು ಎಸೆಯಲು ಯತ್ನಿಸುವಾಗ ಜೈಲು ಭದ್ರತಾ ಪಡೆ ಗಮನಿಸಿ ತಕ್ಷಣ ವಶಕ್ಕೆ ಪಡೆದುಕೊಂಡಿದೆ.
ಬಂಧಿತರನ್ನು ಪಿಂಟು, ಅನಿಲ್ ಹಾಗೂ ವಿಜಯ್ ಜಾಧವ್ ಎಂದು ಗುರುತಿಸಲಾಗಿದೆ. ಮೂವರೂ ಕಲಬುರಗಿ ನಗರದ ಬಸವ ನಗರ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲು ಭದ್ರತೆಗೆ ನಿಯೋಜನೆಯಲ್ಲಿದ್ದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಮೂವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ವಿಚಾರಣೆ ನಡೆಸಿದ್ದಾರೆ. ನಂತರ ಬಂಧಿತ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಫರಹತಬಾದ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಫರಹತಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



