ಬೆಂಗಳೂರು:- ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಇನ್ಮುಂದೆ ನಗರದಲ್ಲಿ ವೀಕೆಂಡ್ ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ ಮಾಡಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶ ಹೊರಡಿಸಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ರೋಡ್ ರೇಜ್ ಕೇಸ್ ಹೆಚ್ಚಳ ಹಿನ್ನೆಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರತಿ ಠಾಣೆಯಲ್ಲೂ ರಾತ್ರಿ ಕರ್ತವ್ಯಕ್ಕೆ ಇಬ್ಬರು ಮಹಿಳಾ ಹೆಚ್‌ಸಿ, ಪಿಸಿ ನಿಯೋಜನೆ ಮತ್ತು ರೋಡ್ ರೇಜ್ ಕೇಸ್ ನಿಯಂತ್ರಣಕ್ಕೆ ಪ್ರತಿ ಗುರುವಾರದಿಂದ ಭಾನುವಾರದವರೆಗೂ ಡ್ರಂಕ್ & ಡ್ರೈವ್ ಟೆಸ್ಟ್‌ಗೆ ಸೂಚಿಸಲಾಗಿದೆ.
ನಗರದ ಎಲ್ಲಾ ಠಾಣೆಯ ಪಿಎಸ್‌ಐಗಳಿಂದ ವಿಶೇಷ ಕಾರ್ಯಾಚರಣೆ ಮಾಡುವುದು. ಸಿಸಿಟಿವಿ ಇರುವ ಜಂಕ್ಷನ್‌ಗಳಲ್ಲಿ ಪರಿಶೀಲಿಸಿ ಪ್ರಕರಣ ದಾಖಲಿಸುವಾಗ ಮಹಿಳಾ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಲಾಗಿದೆ.
ಇನ್ನು ರಾತ್ರಿ ವೇಳೆ ಸಂಚಾರ ದಟ್ಟಣೆ ಹಾಗೂ ಅಪಘಾತ ಕೇಸ್ ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ ರಾತ್ರಿ ವೇಳೆ ಅಲರ್ಟ್ ಆಗಿರುವಂತೆ ಸಂಚಾರ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಖಡಕ್ ಸೂಚನೆ ನೀಡಲಾಗಿದೆ.
ಸೂಚನೆಗಳು ಹೀಗಿವೆ:-
ರಾತ್ರಿ ಪಾಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮೇಲಾಧಿಕಾರಿಗಳ ಸೂಚನೆ ಪಾಲಿಸಬೇಕು.
ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವವರಿಗೆ ಎರಡು ಬೈಕ್ ಒದಗಿಸಬೇಕು.
ಮಹಿಳೆಯರು ಇದ್ದ ವಾಹನ ಅಪಘಾತದ ಕುರಿತು ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಬೇಕು.
ಮಹಿಳಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಬೇಕು.
ಅಪಘಾತವಾದಾಗ ಹಿರಿಯ ನಾಗರೀಕರು, ಮಕ್ಕಳು, ಮಹಿಳೆಯರಿದ್ದಲ್ಲಿ ತುರ್ತಾಗಿ ಸ್ಪಂದಿಸಬೇಕು. ಗಾಯಾಳುವಿದ್ದಲ್ಲಿ ಆಸ್ಪತ್ರೆಗೆ ಸಾಗಿಸಬೇಕು.
ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಬೇಕು.
ರಾತ್ರಿ ವೇಳೆ ಗಣ್ಯವ್ಯಕ್ತಿಗಳ ಸಂಚಾರವಿದ್ದಲ್ಲಿ ಯಾವುದೇ ತೊಂದರೆಯಾಗದ ರೀತಿ ಕ್ರಮ.
ರಾತ್ರಿ ವೇಳೆ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ವಾಹನಗಳು ಸಾಗುವ ಮಾರ್ಗದಲ್ಲಿ ಆದ್ಯತೆ ನೀಡಬೇಕು. ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು.
ರಾತ್ರಿ ವೇಳೆ ಹಾಗೂ ಬೆಳಗಿನ ಜಾವದಲ್ಲಿ ವೀಲಿಂಗ್ ಮಾಡುವ ಸ್ಥಳಗಳು ಗುರುತಿಸಬೇಕು.
ಮುಂಜಾಗ್ರತಾ ಕ್ರಮಗಳೊಂದಿಗೆ ನಿಗಾವಹಿಸುವುದು.
ರಾತ್ರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಠಾಣಾ ಸರಹದ್ದಿನಲ್ಲಿರುವ ಸಿಗ್ನಲ್ ಲೈಟ್‌ಗಳು, ವೆಲಿಕಾನ್ ಸಿಗ್ನಲ್ಗಳು, ಸಿಸಿಟಿವಿ ಕ್ಯಾಮರಾಗಳು ಹಾಗೂ ಸರ್ಕಾರಿ ಸ್ವತ್ತುಗಳ ಬಗ್ಗೆ ಗಸ್ತು ವೇಳೆ ನಿಗಾವಹಿಸಬೇಕು.
ಠಾಣಾ ಸರಹದ್ದಿನಲ್ಲಿ ರಾತ್ರಿ ವೇಳೆ ತೆರೆದಿರುವ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಇತರೆ ಮನೋರಂಜನೆ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ವಹಿಸಬೇಕು.