ಬೆಂಗಳೂರು:- ಬೆಂಗಳೂರಿನ ಈ ಮಾರ್ಗದಲ್ಲಿ ಇಂದು ಹೆವಿ ಟ್ರಾಫಿಕ್ ಇರಲಿದ್ದು, ವಾಹನ ಸವಾರರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಪ್ಯಾಲೆಸ್ ಗ್ರೌಂಡ್ಸ್‌ನ ಕೃಷ್ಣ ವಿಹಾರ ಗೇಟ್ ಸಂಖ್ಯೆ 01ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗೋಲ್ಡನ್ ಜೂಬಿಲಿ ಕಾರ್ಯಕ್ರಮ ಇಂದು ನಡೆಯಲಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಗಣ್ಯಾತಿ ಗಣ್ಯರು ಸೇರಿ ಸಾವಿರಾರು ಜನ ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿರುವ ಕಾರಣ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ.
ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯ ಸಚಿವರು, ಗಣ್ಯರು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿ ಸುಮಾರು 80,000 ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಸುಮಾರು 2,305 ವಾಹನಗಳು ಸ್ಥಳಕ್ಕೆ ಆಗಮಿಸಲಿದ್ದು, ಸುತ್ತಲಿನ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಆಗಲಿದೆ. ಕೃಷ್ಣ ವಿಹಾರ ಗೇಟ್ (ಪ್ಯಾಲೆಸ್ ಗ್ರೌಂಡ್ಸ್), ಬಳ್ಳಾರಿ ರಸ್ತೆ, ಸಿ.ವಿ. ರಾಮನ್ ರಸ್ತೆ ಮತ್ತು ಜಯಮಹಲ್ ರಸ್ತೆಗಳಲ್ಲಿ ಭಾರಿ ವಾಹನದಟ್ಟಣೆ ನಿರೀಕ್ಷೆ ಇದೆ ಎನ್ನಲಾಗಿದೆ.
ಬದಲಿ ಮಾರ್ಗಗಳು ಇಲ್ಲಿದೆ:
ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಹೋಗುವವರು:-
ಮಾರ್ಗ 1: ಹೆಬ್ಬಾಳ – ಎಡಕ್ಕೆ ತಿರುಗಿಕೆ – ನಾಗವಾರ ಜಂಕ್ಷನ್‌ನಲ್ಲಿ ಬಲದ ಕಡೆ – ಬಂಬೂ ಬಜಾರ್ – ಕ್ವೀನ್ಸ್ ರಸ್ತೆ – ನಗರ
ಮಾರ್ಗ 2: ಹೆಬ್ಬಾಳ ರಿಂಗ್ ರಸ್ತೆ – ಕುವೆಂಪು ವೃತ್ತ – ಗೊರ್ಗುಂಟೆ ಪಾಳ್ಯ ಜಂಕ್ಷನ್ – ಎಡಕ್ಕೆ – ಡಾ.ರಾಜ್ ಕುಮಾರ್ ರಸ್ತೆ – ನಗರ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು:
ಬಳ್ಳಾರಿ ರಸ್ತೆಯ ಬದಲು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ – ಕಲ್ಪನಾ ಜಂಕ್ಷನ್ – ಉದಯ ಟಿವಿ ಓಲ್ಡ್ ಜಂಕ್ಷನ್ – ಕ್ಯಾಂಟೋನ್ಮೆಂಟ್ ರೈಲ್ವೆ ಸ್ಟೇಷನ್ – ಟ್ಯಾನರಿ ರಸ್ತೆ – ನಾಗವಾರ – ವಿಮಾನ ನಿಲ್ದಾಣ
ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ:
ಮತ್ತಿಕೆರೆ ರಸ್ತೆ – ಬಿಇಎಲ್ ಸರ್ಕಲ್‌ನಲ್ಲಿ ಬಲಕ್ಕೆ – ರಿಂಗ್ ರೋಡ್ ಮೂಲಕ ವಿಮಾನ ನಿಲ್ದಾಣ
ಯಶವಂತಪುರದಿಂದ ನಗರ ಕಡೆ:
ಡಾ.ರಾಜ್ ಕುಮಾರ್ ರಸ್ತೆ ಮೂಲಕ ಮಧ್ಯ ಬೆಂಗಳೂರು ಪ್ರವೇಶಿಸಬಹುದು
ಬಳ್ಳಾರಿ ರಸ್ತೆಯ ಕಡೆಗೆ ಭಾರೀ ವಾಹನಗಳಿಗೆ ಅನುಮತಿ ಇಲ್ಲದ ಕಾರಣ ಔಟರ್ ರಿಂಗ್ ರೋಡ್ ಬಳಸಬೇಕು. ಓಲ್ಡ್ ಹೈ ಗ್ರೌಂಡ್ಸ್ ಪೊಲೀಸ್ ಸ್ಟೇಷನ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳನ್ನು ಕಲ್ಪನಾ ಜಂಕ್ಷನ್- ಉದಯ ಟಿವಿ ಓಲ್ಡ್ ಜಂಕ್ಷನ್ – ಕ್ಯಾಂಟೋನ್ಮೆಂಟ್ ರೈಲ್ವೆ ಸ್ಟೇಷನ್ – ಟ್ಯಾನರಿ ರಸ್ತೆ – ನಾಗವಾರ ಕಡೆಗೆ ತೆರಳಬೇಕು. ಸಿ.ವಿ. ರಮಾನ ರಸ್ತೆಯ ಕಡೆಗೆ ಹೋಗುವ ರಸ್ತೆಯಲ್ಲೂ ಭಾರೀ ವಾಹನಗಳಿಗೆ ನಿಷೇಧ ಇರಲಿದೆ.


