ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಇಂದು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಲವು ರಸ್ತೆಗಳ ಸಂಚಾರದಲ್ಲಿ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ ಜಾರಿಯಲ್ಲಿರಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕೆ.ಜಿ. ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲತಿರುವು ಪಡೆದು ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ರಸ್ತೆಯ ಮಹಾರಾಣಿ ಅಂಡರ್‌ಪಾಸ್ ಮಾರ್ಗವನ್ನು ಬಳಸಬೇಕಾಗಿದೆ.
ಇನ್ನು ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಹಾಗೂ ಹೋಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್. ಸರ್ಕಲ್ ಕಡೆಗೆ ತೆರಳುವ ವಾಹನ ಸವಾರರು ಸಂಚಾರ ದಟ್ಟಣೆ ತಪ್ಪಿಸಲು ಹಳೆಯ ಜೆಡಿಎಸ್ ಕಚೇರಿ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸಬಹುದಾಗಿದೆ.
ಗಾಂಧಿನಗರ ಕಡೆಗೆ ತೆರಳುವ ವಾಹನಗಳ ಅನುಕೂಲಕ್ಕಾಗಿ ಸುಬ್ಬಣ್ಣ ಜಂಕ್ಷನ್‌ನಿಂದ ಎಂ.ಟಿ.ಆರ್. ಜಂಕ್ಷನ್‌ವರೆಗೆ ಇರುವ ಏಕಮುಖ ಸಂಚಾರ ರಸ್ತೆಯನ್ನು ತಾತ್ಕಾಲಿಕವಾಗಿ ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಪಾರ್ಕಿಂಗ್‌ಗೆ ನಿರ್ಬಂಧ:
ಇದೇ ವೇಳೆ ಸುಗಮ ಸಂಚಾರದ ದೃಷ್ಟಿಯಿಂದ ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ, ವೈ. ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ ಹಾಗೂ ಕೆ.ಜಿ. ರಸ್ತೆಯಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಲು ಅವಕಾಶವಿರುವುದಿಲ್ಲ ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ವಾಹನ ಸವಾರರು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.



