ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ಮೊದಲ ಹಂತದಲ್ಲಿ ನಿಗದಿತ ಸಮಯದಲ್ಲಿ ಸರಕು ವಾಹನಗಳ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ ಸದ್ಯ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಿಗೆ ಎಲಿವೇಟೆಡ್ ಕಾರಿಡಾರ್ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.
ದ್ವಿಚಕ್ರ ವಾಹನ ಸವಾರರು ಸಾಧ್ಯವಾದಷ್ಟು ಎಡಭಾಗದ ಲೇನ್ನಲ್ಲಿ ಸಂಚರಿಸಬೇಕು. ಲೇನ್ ಶಿಸ್ತು ಪಾಲಿಸುವುದರ ಜೊತೆಗೆ ಅಪಾಯಕಾರಿ ರೀತಿಯಲ್ಲಿ ಓವರ್ಟೇಕ್ ಮಾಡುವುದನ್ನು ತಪ್ಪಿಸಬೇಕು. ಅಲ್ಲದೆ, ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದ ಮಿತಿಯೊಳಗೆ ಸುರಕ್ಷಿತವಾಗಿ ಸಂಚರಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ರಸ್ತೆ ಸುರಕ್ಷತೆ ಹೆಚ್ಚಿಸುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಐದು ಪ್ರಮುಖ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್ಗಳಲ್ಲಿ ವಿವಿಧ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದರು. ಈ ಪೈಕಿ ನಾಲ್ಕು ಕಾರಿಡಾರ್ಗಳಲ್ಲಿ ನಿರ್ಬಂಧ ಜಾರಿಗೊಳಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ ಹಾಗೂ ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ಸಂಚಾರ ಸುಗಮವಾಗಿ ನಡೆಯುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.
ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನ ಸಂಜೀವನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗಿನ ಮಾರ್ಗದಲ್ಲಿ ಸರಕು ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ಪ್ರವೇಶ ಮಾರ್ಗಗಳಲ್ಲೇ ಏಕಕಾಲದಲ್ಲಿ ಬೇರೆಡೆಗೆ ತಿರುಗಿಸುತ್ತಿದ್ದರಿಂದ ಸಂಚಾರ ಗೊಂದಲ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ.
ಇದರಿಂದ ವಾಹನಗಳ ಸರದಿ ಹಾಗೂ ದಟ್ಟಣೆ ಹೆಚ್ಚಾಗಿ, ಪಕ್ಕದ ಸಾಮಾನ್ಯ ರಸ್ತೆಯ ಸಂಚಾರದ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸೆ.11ರಿಂದ ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್ನಲ್ಲೂ ನಿಯಮ:
ಇದೇ ರೀತಿಯ ಹಂತ ಹಂತದ ಸಂಚಾರ ನಿಯಮವನ್ನು ಸೆಪ್ಟೆಂಬರ್ 11, 2026ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲೂ ಜಾರಿಗೊಳಿಸಲಾಗುತ್ತದೆ.
ಮೊದಲ ಹಂತದಲ್ಲಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ ಸದ್ಯ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಪರಿಶೀಲನೆಯ ಫಲಿತಾಂಶದ ಆಧಾರದ ಮೇಲೆ ಉಳಿದ ನಿಗದಿತ ನಿರ್ಬಂಧಗಳನ್ನು ಮುಂದಿನ ಹಂತಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.



