ಮಂಗಳೂರು:-ರಸ್ತೆ ದಾಟುತ್ತಿದ್ದ ಮಹಿಳೆಗೆ ಆಟೋ ಡಿಕ್ಕಿ ಹೊಡೆದು ಅವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ ರಾಮನಗರ ಬಳಿ ಜರುಗಿದೆ.
35 ವರ್ಷದ ಚೇತನಾ ಗಂಭೀರ ಗಾಯಗೊಂಡಿದ್ದಾರೆ. ಮಹಿಳೆ ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲು ಬಂದಿದ್ದರು. ಪಿಗ್ಮಿ ಕಲೆಕ್ಷನ್ ಮುಗಿಸಿ ಚೇತನಾ ಟ್ಯೂಶನ್ ಸೆಂಟರ್‌ನತ್ತ ಬಂದಿದ್ದ ವೇಳೆ ಅಪಘಾತ ಸಂಭವಿಸಿದೆ.
ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಆಟೋ ಎತ್ತಿ ತಾಯಿಯನ್ನು ಮಗಳು ಮೇಲಕ್ಕೆತ್ತಿದ್ದಾಳೆ.
ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.